Total Pageviews

Friday, 7 June 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 137

ದೇವಸ್ಥಾನಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬ ಇವರತ್ತ ಬಂದು ಹರೀಶ ಯಾರೆಂದು ಕೇಳಿ ಆತನಿಗೆ ತಾವು ಪತ್ನಿ ಮತ್ತು ಮಗಳೊಟ್ಟಿಗೆ ಬರಲು ಗುರುಗಳು ಹೇಳಿದ್ದಾರೆಂದನು.ಹರೀಶ ನೀತು ಮೇಲೆದ್ದರೆ ಮೊಲಗಳ ಜೊತೆ ಕುಣಿದಾಡುತ್ತ ನಿಶಾ ಇವರಿಂದ ದೂರ ಹೋಗಿದ್ದು ಅಣ್ಣಂದಿರ ಬೆಂಗಾವಲಿನಲ್ಲಿ ಅವುಗಳೊಂದಿಗೆ ಆಡುತ್ತಿದ್ದಳು. ಗಿರೀಶನನ್ನು ಕೂಗಿ ತಂಗಿಯನ್ನು ಕರೆತರಲು ಹೇಳಿದ ಹರೀಶ ಮಗಳನ್ನೆತ್ತಿಕೊಂಡು ಈಗ ಮಾಮಿ ಹತ್ತಿರ ಹೋಗೋಣ ಆಮೇಲೆ ಬಂದು ನಿನ್ನ ಮೊಲಗಳ ಜೊತೆ ಆಡುವಿಯಂತೆ ಎಂದು ಸಮಾಧಾನಪಡಿಸಿ ದೇವಸ್ಥಾನದ ಒಳಗೆ ಬಂದರು. ದಂಪತಿಗಳಿಗೆ ತಮ್ಮೆದುರು ಕುಳಿತುಕೊಳ್ಳುವಂತೆ ಸ್ವಾಮೀಜಿಗಳು ಹೇಳಿದಾಗ ಅಮ್ಮನ ಮಡಿಲಿನಲ್ಲಿದ್ದ ನಿಶಾ ಅಮ್ಮನ ಕೆನ್ನೆ ಸವರುತ್ತ.....ಮಮ್ಮ ನೊಲ ನಾನು ಹೋತಿನಿ.....ಎಂದು ತುಂಬ ಮುದ್ದಾಗಿ ಕೇಳಿದರೆ ನೀತು ಆಕೆಗೆ ಆಮೇಲೆ ಆಡೋಣ ಎಂದೇಳಿ ಸಮಾಧಾನ ಮಾಡುತ್ತಿದ್ದಳು.

ಸ್ವಾಮೀಜಿಗಳು ಅವಳಾಟ ನೋಡಿ ನಗುತ್ತ.......ಹರೀಶ ಈ ಮಗು ನಿಮ್ಮ ಮನೆಗೆ ಸೆರುವುದಕ್ಕೂ ಮೊದಲು ನಿಮ್ಮ ಜೀವನ ಹೇಗಿತ್ತು ?

ಹರೀಶ ಹೆಂಡತಿ ಮಗಳನ್ನೊಮ್ಮೆ ನೋಡಿ.....ನೀವು ಕೇಳುತ್ತಿರುವ ಸಂಗತಿ ನನಗರ್ಥವಾಯಿತು ಗುರುಗಳೆ. ಸತ್ಯ ಹೇಳಬೇಕೆಂದರೆ ನನ್ನ ಮತ್ತು ಇವಳ ನಡುವೆ ಒಮ್ಮೆಯೂ ವೈಮನಸ್ಸು ಮನಸ್ಥಾಪವಾಗಲಿ ಇರಲೇ ಇಲ್ಲ ಆದರೆ ಒಂದೇ ಸೂರಿನಡಿ ಜೊತೆಗಿದ್ದರೂ ನಾವು ಬಹಳ ದೂರ ಉಳಿದಿದ್ದೆವು ಸಮುದ್ರದ ಎರಡು ತೀರಗಳಂತೆ. ಮನಸ್ಸಿನಲ್ಲಿ ಹೆಂಡತಿ ಮಕ್ಕಳ ಬಗ್ಗೆ ನನ್ನಲ್ಲಿ ಅಪಾರ ಪ್ರೀತಿಯಿದ್ದರೂ ಅದನ್ನವರಿಗೆ ವ್ಯಕ್ತಪಡಿಸುವ ಮನಸ್ಥಿತಿಯೇ ಇರಲಿಲ್ಲ . ಹಾಗೆಯೇ ಇವಳು ಕೂಡ ಗಂಡ ಮಕ್ಕಳನ್ನು ತುಂಬ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರೂ ಸಹ ತನ್ನ ಮನಸ್ಸಿನ ಯಾವುದೇ ಕೋರಿಕೆಯನ್ನು ಹೇಳಿಕೊಳ್ಳುತ್ತಿರಲಿಲ್ಲ . ಒಂದೇ ಮಾತಿನಲ್ಲಿ ಹೇಳುವುದಾದರೆ ನಾವಿಬ್ಬರು ಸತಿಪತಿಗಳಾಗಿದ್ದು ಅಪರಿಚಿತರಂತೆ ವರ್ತಿಸುತ್ತಿದ್ದೆವು. ನಮ್ಮೀ ಮಗಳು ಮನೆಯೊಳಗೆ ಕಾಲಿಡುವುದಕ್ಕೆ ಕೆಲವು ದಿನಗಳ ಮುಂಚೆ ತಾನೆ ನಮ್ಮ ನಡುವಣ ಇದ್ದಂತ ಗೋಡೆ ಛಿದ್ರಗೊಂಡು ಪ್ರೀತಿ.....ಅನುರಾಗ...ಆಪ್ಯಾಯತೆ ತುಂಬಿರುವ ಹೊಸ ಜೀವನ ಪ್ರಾರಂಭಿಸಿದೆವು.

ಸ್ವಾಮೀಜಿ.....ನಿಮ್ಮಿಬ್ಬರ ನಡುವೆ ಪರಸ್ಪರರ ಮೇಲಿದ್ದ ಪ್ರೀತಿಯು ಕಾರ್ಮೋಡದ ಮರೆಯಿಂದ ಹೊರ ಬಂದಿದ್ದೇ ನಿಮ್ಮ ಮನೆಗೆ ಈ ಮಗುವಿನ ಆಗಮನದ ಮುನ್ಸೂಚನೆಯಾಗಿತ್ತು. ನಿನಗೆ ಜ್ಞಾಪಕವಿದೆ ಅನಿಸುತ್ತೆ ಮಗಳೇ ನಾನು ನಿನ್ನ ಮನೆಗೆ ಬಿಕ್ಷಾಟನೆಯ ನೆಪದಲ್ಲಿ ಮೊದಲ ಬಾರಿ ಬಂದಿದ್ದೂ ಈ ಮಗು ನಿನ್ನ ಮಡಿಲನ್ನು ಸೇರಿಕೊಂಡ ನಂತರವೇ. ಈಗ ಈ ವಿಷಯ ಬಿಡಿ ಗಿರೀಶನ ಬಗ್ಗೆ ನಿಮ್ಮಿಬ್ಬರಿಗೂ ಇರುವ ಅಭಿಪ್ರಾಯವೇನು.

ನೀತು....ಗಿರೀಶನಂತ ಮಗ ಹುಟ್ಟಿರುವುದೇ ತಂದೆ ತಾಯಿಗಳಾದ ನಮಗೆ ಗೌರವ ಮತ್ತು ಹೆಮ್ಮೆಯ ವಿಷರ ಗುರುಗಳೆ. ಅವನು ಸ್ವಲ್ಪ ಮಿತಭಾಷಿ ಆದರೂ ಸಂವೇದನಶೀಲ ಮತ್ತು ಸದ್ಗುಣ ಸಂಪನ್ನನಾದ ಮೃದು ಮನಸ್ಸಿನ ಹುಡುಗ.

ಸ್ವಾಮೀಜಿ.....ವಿಧಿ ಲಿಖಿತದ ಪ್ರಕಾರ ಆತನಿಗೆ ದ್ವಿಪತ್ನಿತ್ವದ ಯೋಗ ಇದೆ.

ಸ್ವಾಮೀಜಿಗಳ ಮಾತಿನಿಂದ ಹರೀಶ ಅಚ್ಚರಿಗೊಂಡರೆ ನೀತುವಿನ ಮುಖದಲ್ಯಾವುದೇ ಪ್ರತಿಕ್ರಿಯೆಯೂ ತೋರಿಸದೆ ಕುಳಿತಿದ್ದಳು.

ಹರೀಶ.....ಗುರುಗಳೆ ನೀವೇನು ಹೇಳುತ್ತಿರುವಿರಿ ?

ಸ್ವಾಮೀಜಿ.....ಎಲ್ಲವೂ ಅರ್ಥವಾಗುತ್ತೆ ನೀನೀಗ ಹೋಗಿ ಅಶೋಕ ರಜನಿ ಮತ್ತು ವಿಕ್ರಂ—ಸುಮ ದಂಪತಿಗಳಿಗೆ ಇಲ್ಲಿಗೆ ಬರುವಂತೇಳು.

ಹರೀಶ ಹೊರಗೋಗಿ ನಾಲ್ವರನ್ನು ಕರೆತಂದಾಗ ಅವರ ಕಡೆಗೊಮ್ಮೆ ನೋಡಿದ ಗುರುಗಳು ಮಾತನ್ನು ಮುಂದುವರಿಸಿದರು.

ಸ್ವಾಮೀಜಿ.....ಮಗಳೇ ರಜನಿ ವಿಧಿ ಬರೆದಿರುವುದನ್ನು ಬದಲಿಸಲು ಯಾರಿಂದ ಸಾಧ್ಯವಿದೆ ?

ರಜನಿ ಅಚ್ಚರಿಗೊಳ್ಳುತ್ತ.......ಇದನ್ನು ನನಗೇಕೆ ಕೇಳಿದಿರೊ ಎಂದು ತಿಳಿಯದು ಗುರುಗಳೆ ಆದರೆ ವಿಧಿಯ ಲಿಖಿತವನ್ನು ತ್ರಿಮೂತ್ರಿಗಳೂ ಸಹ ಬದಲಾಯಿಸಲು ಸಾಧ್ಯವಿಲ್ಲವೆಂದಷ್ಟೆ ನನಗೆ ತಿಳಿದಿದೆ.

ಸ್ವಾಮೀಜಿ...ಮಗಳೇ ಸುಮ ನಿನ್ನ ಅಭಿಪ್ರಾಯ.

ಸುಮ......ರಜನಿ ಹೇಳಿದ್ದನ್ನೇ ನಾನೂ ಅನುಕರಿಸುತ್ತೇನೆ ಗುರುಗಳೆ ವಿಧಿಲಿಖಿತವನ್ನು ಬದಲಾಯಿಸುವ ಪ್ರಯತ್ನ ಮಾತ್ರಕ್ಕೆ ಸೃಷ್ಠಿಯಲ್ಲಿ ಅಲ್ಲೋಲ ಕಲ್ಲೋಲವಾದಂತ ಘಟನೆಗಳು ನಮ್ಮ ಪುರಾತನವಾದ ಗ್ರಂಥಗಳಲ್ಲಿ ಉಲ್ಲೇಖವಾಗಿದೆ ಎಂಬುದು ತಿಳಿದಿದೆ.

ಸ್ವಾಮೀಜಿ......ನಾನೇಕೆ ನಿಮ್ಮಿಬ್ಬರಿಗೆ ಈ ಪ್ರಶ್ನೆ ಕೇಳಿದೆನೆಂದು ನಿಮ್ಮ ಮನದಲ್ಲಿ ಪ್ರಶ್ನೆ ಉದ್ಬವಿಸುವುದು ಸಹಜ ಇದರಲ್ಲಿ ನಿಮ್ಮ ಇಬ್ಬರು ಮಕ್ಕಳ ಜೀವನದ ಸಾರವೇ ಅಡಗಿದೆ ಅದಕ್ಕಾಗಿ ಕೇಳಿದೆ.

ರಜನಿ ಮತ್ತು ಸುಮ......ಗುರುಗಳೇ ಅದೇನೆಂದು ಬಿಡಿಸಿ ಹೇಳಿರಿ ನಮ್ಮ ಮಕ್ಕಳಿಗ್ಯಾವುದಾದರೂ ತೊಂದರೆ ಏದುರಾಗಿದೆಯಾ ?

ಸ್ವಾಮೀಜಿ......ನಿಮ್ಮ ಮಕ್ಕಳ ಬಗ್ಗೆ ಎಂದಾಕ್ಷಣ ಅವರಿಗೆ ತೊಂದರೆ ಏದುರಾಗಿದೆ ಎಂದರ್ಥವಲ್ಲ ಮಗಳೇ ಅವರಿಬ್ಬರ ಮುಂದಿನ ಭವಿಷ್ಯ ಹೇಗಿರಬೇಕೆಂಬ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ ಎಂಬ ಅರ್ಥದಲ್ಲಿ ಹೇಳಿದೆ. ಗಿರೀಶ ಮತ್ತು ರಶ್ಮಿಯ ವಿವಾಹ ಮಾಡುವುದು ಎಂಬುದನ್ನು ನೀವೆಲ್ಲರೂ ಮೊದಲೇ ನಿಶ್ಚಯಿಸಿರುವಿರಿ ಆದರೊಂದು ಸಮಸ್ಯೆಯಿದೆ. ಗಿರೀಶನ ಹಣೆ ಬರಹವೋ ಅಥವ ರಶ್ಮಿಯ ಪೂರ್ವ ಜನ್ಮದ ಕರ್ಮ ಫಲದಿಂದಲೋ ಗಿರೀಶನಿಗೆ ಇಬ್ಬರು ಹೆಂಡತಿಯರ ಯೋಗವಿದೆ.

ಗುರುಗಳ ಮಾತನ್ನು ಕೇಳಿ ರಜನಿ ಮತ್ತು ಅಶೋಕ ಬೆಚ್ಚಿ ಬೀಳುತ್ತ ಅವರ ಮೈಂಡ್ ಪೂರ್ತಿ ಬ್ಲಾಂಕಾಗಿ ಹೋಯಿತು. ಆದರೂ ಅಶೋಕ ಸಾವರಿಸಿಕೊಂಡು......ಹಾಗಿದ್ದರೆ ನನ್ನ ಮಗಳ ಸ್ಥಿತಿ.......

ಸ್ವಾಮೀಜಿ ಅರ್ಧದಲ್ಲೇ ಆತನನ್ನು ತಡೆದು.......ಅಶೋಕ ಅನ್ಯಥಾ ಭಾವಿಸಬೇಡ ರಶ್ಮಿ ಗಿರೀಶನ ಮಡದಿಯಾಗುವುದು ಶತಃಸಿದ್ದ ಆದರೆ ಗಂಡನ ಪ್ರೀತಿಯನ್ನು ಮತ್ತೊಬ್ಬಳೊಂದಿಗೆ ಹಂಚಿಕೊಳ್ಳಲೇಬೇಕಾದ್ದು ಆಕೆಗೆ ಅನಿವಾರ್ಯ. ರಶ್ಮಿ ಹಿಂದಿನ ಜನ್ಮದಲ್ಲಿ ಯಾರಾಗಿದ್ದಳು ಆಗ ಆಕೆ ಮಾಡಿದ ಕರ್ಮಗಳೇನು ಎಂಬುದು ನನಗೆ ತಿಳಿದಿದ್ದರೂ ಇಲ್ಲಿ ಅದನ್ನು ಪ್ರಸ್ತಾಪಿಸುವುದು ಸರಿಯಲ್ಲ ಅದು ನಿಮಗೆ ತಿಳಿಯಬಾರದ ವಿಷಯವೂ ಹೌದು. ಗಿರೀಶನ ಮತ್ತೊಬ್ಬ ಮಡದಿಯಾಗುವವಳು ಯಾರೆಂದು ತಿಳಿದುಕೊಳ್ಳುವ ಆಸಕ್ತಿ ನಿಮಗಿಲ್ಲವೇ ?

ಯಾರೊಬ್ಬರೂ ಗುರುಗಳ ಪ್ರಶ್ನೆಗೆ ಉತ್ತರಿಸದೆ ಅವರನ್ನೇ ನೋಡುತ್ತ ಮೌನವಾಗಿದ್ದ ಕಾರಣ ಸ್ವಾಮೀಜಿಗಳೇ.....ಆ ಹುಡುಗಿ ಬೇರಾರೂ ಅಲ್ಲ ವಿಕ್ರಂ—ಸುಮರ ಮಗಳಾದ ದೃಷ್ಟಿ . ವಿಕ್ರಂ ನಿನ್ನ ಮಗಳು ಗಿರೀಶನನ್ನು ಬಹುಶ ಇಲ್ಲಿಯವರೆಗೆ ಯಾರೊಬ್ಬರೂ ಪ್ರೀತಿಸಿರದಷ್ಟು ಆತನ ತಂದೆ ತಾಯಿಯರನ್ನೂ ಸೇರಿಸಿ ಹೇಳುವೆ ಅಷ್ಟರಮಟ್ಟಿಗೆ ಪ್ರೀತಿಸುತ್ತಿದ್ದಾಳೆ. ಅವಳ ಮನದಲ್ಲಿ ನೆಲೆಸಿರುವ ಗಿರೀಶನ ಪ್ರೀತಿಯ ಪ್ರತಿರೂಪವನ್ನು ನನ್ನಿಂದಾಗಲಿ ನಿಮ್ಮಿಂದಲ್ಲ ದೇವರಿಂದಲೂ ಕೂಡ ಅಳಿಸುವುದು ಅಸಾಧ್ಯ. ಆದರೆ ಒಂದಂತು ಸತ್ಯ ನೀವೆಷ್ಟೆ ಪ್ರಯತ್ನ ಮಾಡಿದರೂ ಈ ಮೂವರ ವಿವಾಹವನ್ನು ತಡೆಯಲು ನಿಮ್ಮಿಂದ ಸಾಧ್ಯವಿಲ್ಲ.

ಸುಮ....ದೃಷ್ಟಿ ಗಿರೀಶನನ್ನು ಮದುವೆಯಾದರೆ ನನಗೆ ತುಂಬಾನೇ ಸಂತೋಷ ಗುರುಗಳೇ ಆದರೆ ರಶ್ಮಿಯೂ ನನಗೆ ಮಗಳಿದ್ದಂತೆಯೇ ಇದು ಆಕೆಗೆ ಮಾಡುತ್ತಿರುವ ಅನ್ಯಾಯವಲ್ಲವಾ ?

ಸ್ವಾಮೀಜಿ.....ದೃಷ್ಟಿ ಮತ್ತು ರಶ್ಮಿಯೊಂದಿಗೆ ನಾವೇ ಪ್ರತ್ಯೇಕವಾಗಿ ಮಾತನಾಡುತ್ತೇವೆ ಆದರೆ ನಿಮಗೂ ವಿಷಯ ತಿಳಿದಿರಲೆಂಬುದಕ್ಕೆ ಇಲ್ಲಿ ಅದನ್ನು ಪ್ರಸ್ತಾಪಿಸಿದೆ. ದೃಷ್ಟಿ ಈಗಾಗಲೇ ಗಿರೀಶನ ಬಳಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದಾಳೆ ಪಾಪ ಅಂದಿನಿಂದ ಅವನು ಅವಳು ಕಂಡೊಡನೇ ಹೆದರಿ ನಡುಗುತ್ತಿದ್ದಾನೆ. ಅವನಿಗೂ ಇದಕ್ಕೆ ಪರಿಹಾರವೇನೆಂದು ತಿಳಿದಿಲ್ಲವಲ್ಲ ಆದರೆ ಮಗ ಚಿಂತೆಯಲ್ಲಿರುವ ಸಂಗತಿ ತಾಯಿಯಿಂದ ಮುಚ್ಚಿಡಲು ಸಾಧ್ಯವಿದೆಯಾ ? ನೀತು ಅವನ ಬಳಿ ಕಾರಣ ಕೇಳಿದ್ದಕ್ಕೆ ಅವನೂ ಅಮ್ಮನಿಗೆ ಎಲ್ಲ ವಿಷಯ ಹೇಳಿಕೊಂಡಿದ್ದಾನೆ ಆದರೆ ಸಮಸ್ಯೆಗೆ ಪರಿಹಾರ ಅವಳಲ್ಲಿಯೂ ಸಹ ಇಲ್ಲವಲ್ಲ. ಈ ವಿಷಯದ ಬಗ್ಗೆ ನಾವು ವಿಸ್ತಾರವಾಗಿ ಮುಂದೊಂದು ದಿನ ಮಾತನಾಡಿ ಎಲ್ಲದಕ್ಕೂ ಪರಿಹಾರ ಸೂಚಿಸುತ್ತೀನಿ ಅಲ್ಲಿಯ ತನಕ ಇದರಿಂದ ನೀವೆಲ್ಲರೂ ನಿಶ್ಚಿಂತರಾಗಿರಿ. ಹರೀಶ ಮಿಕ್ಕವರಿಗೂ ಒಳಗೆ ಬರುವಂತೆ ಕರೆದು ಬಾರಪ್ಪ.

ಅಮ್ಮನ ಮಡಿಲಲ್ಲಿ ಕುಳಿತಿದ್ದ ನಿಶಾಳಿಗೆ ಗುರುಗಳಾಡುತ್ತಿದ್ದ ಮಾತು ಅರ್ಥವಾಗದೆ ಕುಳಿತಲ್ಲೇ ತೂಕಡಿಸುತ್ತ ಅತ್ತಿತ್ತ ವಾಲಿಕೊಳ್ಳುತ್ತಿದ್ದಳು. ಹೊರಗಿನಿಂದ ಎಲ್ಲರೂ ಒಳಗೆ ಬರುತ್ತಿರುವ ಶಬ್ದದಿಂದ ಕಣ್ತೆರದ ನಿಶಾ ಅಣ್ಣದಿಂರನ್ನು ಕಂಡು ಅವರತ್ತ ಹೋಗಲು ಎದ್ದವಳನ್ನು ನೀತು ಪುನಃ ಕೂರಿಸಿಕೊಳ್ಳುತ್ತ......ಈಗ ಸುಮ್ಮನೆ ಕೂತಿರು ಚಿನ್ನಿ ಆಮೇಲೆ ಅಣ್ಣಂದಿರ ಜೊತೆ ನಿನ್ನ ಮೊಲಗಳೊಟ್ಟಿಗೆ ಆಡುವಿಯಂತೆ. ಅಲ್ಲಿನ ಪರಾಂಗಣದ ಬಾಗಿಲನ್ನು ಭದ್ರಪಡಿಸಲು ಹರೀಶನಿಗೆ ತಿಳಿಸಿ ಎಲ್ಲರ ಕಡೆಗೂ ದೃಷ್ಟಿ ಹಾಯಿಸಿದ ಸ್ವಾಮೀಜಿಗಳಿಗೆ ರಜನಿ — ಅಶೋಕ ಮತ್ತು ಸುಮ — ವಿಕ್ರಂ ದಂಪತಿಗಳು ತಮಗಾದ ಶಾಕಿನಿಂದ ಇನ್ನೂ ಚೇತರಿಸಿಕೊಳ್ಳುವುದರಲ್ಲೇ ಇದ್ದರು.

ಸ್ವಾಮೀಜಿಗಳು......ನೀವೆಲ್ಲರೂ ಒಂದೇ ಕುಟುಂಬದವರಿಗಿಂತಲೂ ಹೆಚ್ಚಾಗಿ ಎಲ್ಲರ ಸುಖ ದುಃಖಗಳಲ್ಲಿ ಭಾಗಿಯಾಗುವಿರಿ ಅದಕ್ಕಾಗಿ ನಾನು ನಿಮ್ಮೆಲ್ಲರ ಮುಂದೆ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ. ಆದರೆ ಈ ಪರಾಂಗಣದ ಹೊರಗಿನ ಯಾವ ವ್ಯಕ್ತಿಗೂ ನಾನೇನನ್ನು ಹೆಳುವೆನೋ ಅದನ್ನು ತಿಳಿಸಬಾರದು. ಹರೀಶ....ಸುಕನ್ಯಾ...ಸವಿತಾ ನೀವು ಮೂವರೂ ಅಧ್ಯಾಪಕರಾಗಿರುವಿರಿ ನಿಮ್ಮಲ್ಲಿ ಯಾರಿಗಾದರು ರಾಜಸ್ಥಾನದ ಸೂರ್ಯವಂಶಿ ರಜಪುತರ ಸಂಸ್ಥಾನದ ವಿಷಯವಾಗಿ ಏನಾದರೂ ತಿಳಿದಿದೆಯೇ ?

ಹರೀಶ......ಇತಿಹಾಸದಲ್ಲಿ ಅವರ ಉಲ್ಲೇಖ ತುಂಬ ಕಡಿಮೆ ಆದರೆ ಯಾವುದೋ ಹಳೆಯ ಪುಸ್ತಕದಲ್ಲಿ ಅವರ ಬಗ್ಗೆ ಓದಿರುವ ನೆನಪಿದೆ. ನಮ್ಮ ದೇಶದ ಮೇಲೆ ದಂಡೆತ್ತಿ ಬಂದವರಲ್ಲಿ ಯಾರೊಬ್ಬರಿಂದಲೂ ಸೂರ್ಯವಂಶಿಗಳನ್ನು ಸೋಲಿಸುವುದಕ್ಕಾಗಲಿ ಅಥವ ಅವರನ್ನು ತಮ್ಮ ಅಧೀನರಾಗಿರುವಂತೆ ಮಣಿಸಲು ಸಾಧ್ಯವಾಗಲಿಲ್ಲ ಎಂಬುದು ಪುಸ್ತಕದಿಂದ ತಿಳಿದೆ ಇದನ್ನು ಮೀರಿ ಇನ್ನೇನೂ ಗೊತ್ತಿಲ್ಲ.

ಸ್ವಾಮೀಜಿ......ನೀನು ಹೇಳಿದ್ದು ಸತ್ಯ ಹರೀಶ ಇಲ್ಲಿರವರೆಗೂ ಸಹ ಸೂರ್ಯವಂಶಿಗಳನ್ನು ಯಾರಿಂದಲೂ ಮಣಿಸಲು ಸಾಧ್ಯವಿರಲಿಲ್ಲ. ಆದರೀಗ ಅವರದ್ದೇ ವಂಶದ ಕೆಲವು ನರರೂಪ ರಾಕ್ಷಸರಿಂದಾಗಿ ಅವರ ಅಸ್ತಿತ್ವವೇ ಕೊನೆಗಾಣುವಂತಾಗಿದೆ. ಸೂರ್ಯವಂಶಿ ಮಹಾ ಸಂಸ್ಥಾನದ ಕಡೆಯ ಮಹಾರಾಜ ರಾಣಾಪ್ರತಾಪ್ ಎಂಬುವವನದ್ದು ಪುಟ್ಟ ಸುಂದರ ಸಂಸಾರವಾಗಿತ್ತು. ಆದರೆ ಅವನ ತಾಯಿ ತಂದೆಯ ಕಡೆಯಿಂದ ಹಲವಾರು ಬಂಧು ಬಾಂಧವರಿದ್ದಾರೆ ಆದರೆ ಯಾರೂ ಸಹ ಅತ್ಯಾಪ್ತರಲ್ಲ. ಸೂರ್ಯವಂಶಿ ಸಂಸ್ಥಾನದ ಹಲವಾರು ರೀತಿಯ ವ್ಯಾಪಾರ ವಹಿವಾಟುಗಳು ದೇಶ ವಿದೇಶಗಳಲ್ಲಿವೆ ಅದರ ಜೊತೆಗೆ ನೂರಾರು ಐಷಾರಾಮಿ ಹೋಟೆಲ್ಲುಗಳೂ ಅವರ ಅಧೀನದಲ್ಲಿದೆ. ಇಲ್ಲಿಯವರೆಗೂ ಅವರ ಸಮಸ್ತ ಆಸ್ತಿಗಳ ವಿವರ ವಾರಸುದಾರರಿಗೆ ಬಿಟ್ಟು ಬೇರಾರಿಗೂ ಸಹ ತಿಳಿದಿಲ್ಲ. 

ಒಂದು ಅಂದಾಜಿನ ಪ್ರಕಾರಕ್ಕೆ ಹೇಳುವುದಾದರೆ ಸಹಸ್ರಾರು ಕೋಟಿಗಳಿಗೂ ಮೀರಿದ ಆಸ್ತಿಯು ಈ ವಂಶದ ಅಧೀನದಲ್ಲಿದೆ. ರಾಣಾಪ್ರತಾಪನ ಮಡದಿ ಸುಧಾಮಣಿ ಎಂಬ ಸದ್ಗುಣ ಸಂಪ್ಪನ್ನೆಯಾದ ಯುವತಿ ಆದರೆ ಅವರಿದ್ದ ಒಂದೇ ಒಂದು ಕೊರತೆ ಮದುವೆಯಾಗಿ ಹಲವು ವರ್ಷಗಳಾಗಿದ್ದರೂ ಇನ್ನೂ ಅವರಿಗೆ ಸಂತಾನದ ಭಾಗ್ಯ ಇಲ್ಲದಿರುವುದು. ಅವರ ಒಡೆತನದಲ್ಲಿ ಇರುವ ಆಶ್ರಮಗಳಲ್ಲಿನ ಮಕ್ಕಳ ಜೊತೆ ಸಮಯ ಕಳೆಯುತ್ತಿದ್ಧ ಸುಧಾಮಣಿ ತನ್ನ ನೋವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಳು. ಒಂದು ದಿನ ಕೇದಾರನಾಥದಲ್ಲಿ ಒಬ್ಬ ತೇಜಸ್ವಿ ಮಹಾತ್ಮರ ದರ್ಶನ ಅವರಿಬ್ಬರಿಗೂ ಆಗಿದ್ದು ಅವರು ಸೂಚಿಸಿದ ರೀತಿಯಲ್ಲಿ ಜಗನ್ಮಾತೆ ಆದಿಶಕ್ತಿಯ ಆರಾಧನೆ ಮಾಡಲು ಸುಧಾಮಣಿ ತುಂಬ ನಿಷ್ಠೆಯಿಂದ ಆಚರಿಸಿ ಆರಾಧಿಸಲು ನಿಶ್ಚಯಿಸಿದಳು.

ಎಲ್ಲರೂ ಸ್ವಾಮೀಜಿಗಳು ಹೇಳುತ್ತಿರುವುದನ್ನು ತುಂಬ ಗಮನವಿಟ್ಟು ಕೇಳುತ್ತಿದ್ದು ಅದನ್ನು ಮುಂದುವರೆಸುತ್ತ.......ದೈವ ನಂಬಿಕೆ ಮತ್ತು ಅಸಹಾಯಕರಿಗೆ ಸಹಾಯಹಸ್ತ ಚಾಚುವ ಗುಣಗಳನ್ನು ಅತೀ ಚಿಕ್ಕ ವಯಸ್ಸಿನಿಂದಲೂ ಮೈಗೂಡಿಸಿಕೊಂಡಿದ್ದ ಸುಧಾಮಣಿಯ ಯಾವ ಕಲ್ಮಶವೂ ಇರದ ಮನಸ್ಸಿನ ಆರಾಧನೆಗೆ ಜಗನ್ಮಾತೆಯೂ ಒಲಿದಳು. ಅವಳ ನಿಷ್ಠೆ ಮತ್ತು ಭಕ್ತಿಯ ಪ್ರಭಾವದಿಂದ ತಾಯಿ ಜಗನ್ಮಾತೆಯ ಆಶೀರ್ವಾದದ ಫಲಸ್ವರೂಪವಾಗಿ ಮದುವೆಯಾಗಿ ಹಲವಾರು ವರ್ಷಗಳ ನಂತರ ಸುಧಾಮಣಿ ಗರ್ಭಿಣಿಯಾದಳು. ರಾಣಾಪ್ರತಾಪ್ ಮಡದಿ ಗರ್ಭಿಣಿಯಾಗಿರುವ ಸಂಗತಿಯಿಂದ ಅತ್ತೀವ ಸಂತಸದಲ್ಲಿ ತಮ್ಮ ಅಧೀನದಲ್ಲಿ ಕೆಲಸ ಮಾಡುವವರಿಗೆಲ್ಲಾ ಕಾಣಿಕೆಗಳನ್ನು ನೀಡಿ ಆನಂದವನ್ನು ಹಂಚಿಕೊಂಡನು. ಆದರೂ ವಿಧಿಲಿಖಿತ ಬೇರೊಂದು ರೀತಿಯಲ್ಲಿ ಅದಾಗಲೇ ಬರೆದಾಗಿತ್ತು.

ಸುಧಾಮಣಿ ಗರ್ಭಿಣಿಯಾದ ವಿಷಯದಿಂದ ಆ ಮನೆತನದ ಹಿತಶತ್ರುಗಳಿಗೆ ಸಮಸ್ತ ಆಸ್ತಿಗಳಿಗೆ ವರಸುಧಾರರು ಜನ್ಮತಾಳುತ್ತಿರುವ ವಿಷಯದಿಂದ ಕಂಗಾಲಾಗಿದ್ದರು. ಸುಧಾಮಣಿ ಗರ್ಭಾವಸ್ಥೆಯಲ್ಲಿ ಇರುವಾಗಲೇ ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು ಮುಗಿಸುವ ಷಡ್ಯಂತ್ರ ಹೂಡಿದ ಕೆಲವು ಹಿತ ಶತ್ರುಗಳು ಆಕೆಯ ಆಹಾರದಲ್ಲಿ ಸ್ಲೋ ಪಾಯ್ಸನ್ ಬೆರಸುವಂತ ಸಂಚನ್ನು ರೂಪಿಸಿ ಅವಳ ಆಪ್ತರಿಂದಲೇ ಅದನ್ನು ಜಾರಿಗೆ ತಂದರು. ಏಳನೇ ತಿಂಗಳಿನ ಗರ್ಭಾವಸ್ಥೆಯಲ್ಲಿ ಸುಧಾಮಣಿಯ ಅರೋಗ್ಯವು ಅತ್ಯಂತ ಹದಗೆಡುವ ಪರಿಸ್ಥಿತಿಯನ್ನು ತಲುಪಿದ್ದು ಯಾವ ಕ್ಷಣದಲ್ಲೂ ಆಕೆಗೆ ಸಾವು ಸಂಭವಿಸುವ ಪರಿಸ್ಥಿತಿ ಎದುರಾಗಿತ್ತು. 

ಆದರೂ ಆಕೆ ದೃತಿಗೆಡದೆ ತಾಯಿ ಆದಿಶಕ್ತಿಯನ್ನು ನಂಬಿ ತನ್ನನ್ನು ಉಳಿಸುವುದಕ್ಕೆ ನಿಯೋಜಿತರಾದ ವೈದ್ಯರಲ್ಲಿ ತಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಕಂದಮ್ಮನನ್ನು ಹೊರ ಪ್ರಪಂಚಕ್ಕೆ ತರುವ ಇಚ್ಚೆ ವ್ಯಕ್ತಪಡಿಸಿದಳು. ಆಕೆಯ ಸಾವು ಸಮೀಪಿಸುತ್ತಿದೆ ಎಂದರಿತಿದ್ದ ವೈದ್ಯರೂ ಕೊನೆಗೆ ಆಕೆ ಗರ್ಭದಲ್ಲಿರುವ ಮಗುವನ್ನಾದರೂ ಕಾಪಾಡುವ ಉದ್ದೇಶದಿಂದ ಕಾರ್ಯಪ್ರವೃತ್ತರಾಗಿ ಅದರಲ್ಲಿ ಯಶಸ್ವಿಯೂ ಆದರು. ಸುಧಾಮಣಿ ಒಂದು ಸುಂದರ ಹೆಣ್ಣು ಮಗುವಿಗೆ ಜನ್ಮ ನೀಡಿ ಅದನ್ನು ಗಂಡನಾದ ರಾಣಾಪ್ರತಾಪ್ ಕೈಗೊಪ್ಪಿಸಿ ತನ್ನ ಎದೆ ಹಾಲನ್ನೂ ಕುಡಿಸುವುದಿರಲಿ ಹೆತ್ತ ಮಗಳನ್ನು ಕಣ್ತುಂಬ ನೋಡಲೂ ಸಹ ಆಗದೆ ಸ್ವಾರ್ಥವೇ ತುಂಬಿರುವ ಈ ಪ್ರಪಂಚದಿಂದ ಆದಿಶಕ್ತಿಯ ಸನ್ನಿಧಾನಕ್ಕೆ ಪ್ರಯಾಣ ಬೆಳೆಸಿದಳು.

ಮಡದಿಯ ಅಗಲಿಕೆಯಿಂದ ರಾಣಾಪ್ರತಾಪ್ ದುಃಖಿತನಾಗಿದ್ದರೂ ಮಡಿಲಲಿಲ್ಲಿದ್ದ ಪುಟ್ಟ ಮಗುವಿನ ನಗು ಮುಖವನ್ನು ನೋಡುತ್ತ ತನ್ನ ನೋವನ್ನು ಮರೆಯುವ ಪ್ರಯತ್ನದಲ್ಲಿದ್ದನು. ವೈದ್ಯರಿಂದ ಪ್ರೀತಿಯ ಮಡದಿಗೆ ವಿಷಪ್ರಾಷಾಣ ಮಾಡುತ್ತಿದ್ದ ವಿಷಯವನ್ನರಿತು ತಮ್ಮ ಸಂಸ್ಥಾನದ ವಿರುದ್ದ ಇದ್ದಂತಹ ಎಲ್ಲರನ್ನೂ ನಿರ್ನಾಮ ಮಾಡಿದನು. ಆದರೆ ತನ್ನ ಕುಟುಂಬದೊಳಗೇ ಈ ಷಡ್ಯಂತ್ರದ ರುವಾರಿಗಳಿದ್ದಾರೆ ಎಂಬುದನ್ನು ಅರಿತುಕೊಳ್ಳಲು ಆತ ಪ್ರಯತ್ನವನ್ನೇ ಮಾಡಲಿಲ್ಲ. ಹೀಗೆ ಎರಡು ತಿಂಗಳ ನಂತರ ಪ್ರೀತಿಯ ಮಡದಿಗೆ ಅಗ್ನಿ ಸ್ಪರ್ಶವನ್ನು ಮಾಡಿದ್ದ ಸ್ಥಳದಲ್ಲಿ ಕಟ್ಟಿಸಲಾಗಿದ್ದ ನೆನಪಿನ ಗೋಪುರದ ದರ್ಶನ ಮಾಡಿಕೊಂಡು ಮಗಳ ಜೊತೆ ಹಿಂದಿರುಗುತ್ತಿದ್ದಾಗ ಹಿತಶತ್ರುಗಳು ಮತ್ತೊಮ್ಮೆ ತಮ್ಮ ಹೇಡಿತನ ಪ್ರದರ್ಶಿಸುತ್ತ ಆತನ ಕಾರಿಗೆ ಭೀಕರ ಅಪಘಾತ ಮಾಡಿಸಿಬಿಟ್ಟರು. ಮಡಿಲಲ್ಲಿದ್ದ ಮಗಳನ್ನು ಕಾಪಾಡುವ ಸಲುವಾಗಿ ಅವಳನ್ನೆದೆಗೆ ಅವುಚಿಕೊಂಡಿದ್ದ ರಾಣಾಪ್ರತಾಪ್ ತನ್ನ ಅತ್ಯಾಪ್ತ ಬಂಟ ಬರುವ ತನಕ ಜೀವ ಕೈಯಲ್ಲಿಡಿದು ಆತನಿಗೆ ಕೆಲವು ವಿಷಯ ತಿಳಿಸಿ ಮಗಳನ್ನು ಅವನಿಗೊಪ್ಪಿಸಿ ಪ್ರಾಣ ಬಿಟ್ಟನು.

ಸೂರ್ಯವಂಶದ ರಾಜ ರಾಣಿಯರ ಪತನವಾದರೂ ಹಿತಶತ್ರುಗಳಿಗೆ ಅವರ ಆಸ್ತಿಯ ಮೇಲೆ ಒಡೆತನ ಸಾಧಿಸುವುದಕ್ಕೆ ಈ ದಿನದವರೆಗೂ ಸಾಧ್ಯವಾಗಿಲ್ಲ ಅದಕ್ಕೆ ಕಾರಣ ರಾಣಾಪ್ರತಾಪ ಬರೆದಿದ್ದ ವಿಲ್ ಪತ್ರ. ರಾಣಾಪ್ರತಾಪನ ನಂಬುಗೆಯ ಬಂಟ ಮಗುವನ್ನು ಅಲ್ಲಿಂದ ಹೊತ್ತು ತಮ್ಮ ಯಜಮಾನನ ಆಜ್ಞೆಯ ಮೇರೆಗೆ ಆಜ್ಞಾತ ಸ್ಥಳಕ್ಕೆ ತೆರಳಿದ. ಈಗ ಸಂಸ್ಥಾನಕ್ಕೆ ಸೇರಿದ ಅರಮನೆಯಲ್ಲಿ ರಾಣಾಪ್ರತಾಪನ ಚಿಕ್ಕಪ್ಪ ಭಾನುಪ್ರತಾಪ್ ಒಬ್ಬರೇ ವಾಸಿಸುತ್ತಿದ್ದರೂ ಸಂಸ್ಥಾನದ ಎಲ್ಲಾ ವ್ಯವಹಾರಗಳೂ ಈಗಲೂ ರಾಣಪ್ರತಾಪ್ ನೇಮಿಸಿರುವ ಟ್ರಸ್ಟಿನ ಕೆಳಗೆ ನಡೆಯುತ್ತಿದೆಯೇ ಹೊರತು ಭಾನುಪ್ರತಾಪ್ ಕೂಡ ಅದರ ಮೇಲೆ ಅಧಿಕಾರ ಚಲಾಯಿಸುವ ಹಕ್ಕು ಹೊಂದಿಲ್ಲ.

ಎಲ್ಲರೂ ಕಥೆ ಕೇಳಿ ಕಂಬನಿ ಮಿಡಿಯುತ್ತಿದ್ದರೆ ನಿಕಿತಾ.....ಗುರುಗಳೇ ರಾಣಾಪ್ರತಾಪರ ಚಿಕ್ಕಪ್ಪರಾದ ಭಾನುಪ್ರತಾಪ್ ತಮ್ಮ ವಂಶದ ಕುಡಿ ಏನಾದಳೆಂದು ವಿಚಾರಿಸುವ ಪ್ರಯತ್ನ ಮಾಡಲಿಲ್ಲವಾ ?

ಸ್ವಾಮೀಜಿ.....ಇಂದಿಗೂ ಆ ಮಗುವಿನ ಶೋಧ ಕಾರ್ಯ ಪ್ರತಿದಿನ ನಡೆಯುತ್ತಿದೆ ಮಗಳೇ ಆದರೆ ರಾಣಾಪ್ರತಾಪನ ನಂಬುಗೆಯ ಬಂಟ ಒಬ್ಬನನ್ನು ಬಿಟ್ಟು ಬೇರಾರಿಗೂ ಮಗುವಿನ ಸುಳಿವೂ ಸಹ ಸಿಕ್ಕಿಲ್ಲ. ಆದರೆ ಆ ಬಂಟನೀಗ ಅರಮನೆಯಲ್ಲಿದೆ ರಾಣಿಪ್ರತಾಪ್ ಸೂಚಿಸಿದ ರೀತಿ ಅಜ್ಞಾತವಾಸದಕ್ಕೆ ತೆರಳಿದ್ದಾನೆ ಅದೇ ದೊಡ್ಡ ತೊಡುಕಾಗಿದ್ದು ಮಗುವಿನ ಸುಳಿವೇ ಅವರಲ್ಯಾರಿಗೂ ಸಿಗದಂತಾಗಿದೆ.

ನೀತು....ಗುರುಗಳೆ ನೀವು ಸೂರ್ಯವಂಶಿಗಳ ಕಥೆ ಹೇಳಿದರ ಹಿಂದೆ ಯಾವುದೋ ಮರ್ಮವಿದ್ದಂತೆ ನನಗನ್ನಿಸುತ್ತಿದೆ. ಆ ಮಗು ಈಗೆಲ್ಲಿ ಇದ್ದಾಳೆ ? ಅವಳೀಗ ಸುರಕ್ಷಿತವಾಗಿದ್ದಾಳಾ ? ನನ್ನಿಂದ ಯಾವುದೇ ರೀತಿ ಸಹಾಯವಾಗಬೇಕಿದ್ದರೂ ತಿಳಿಸಿ ನೀವು ಹೇಳಿದ ಕಾರ್ಯ ಖಂಡಿತವಾಗಿ ಪೂರ್ಣಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುವೆ.

ನೀತುವಿನ ಜೊತೆ ಮಿಕ್ಕವರೂ ಅದೇ ರೀತಿ ದನಿಗೂಡಿಸಿ ಹೇಳಿದಾಗ ಗುರುಗಳೇ ಎಲ್ಲರನ್ನು ಶಾಂತವಾಗಿರಿ ಎಂದು ಸೂಚಿಸಿದರು.

ಸ್ವಾಮೀಜಿಗಳು.....ನಿನ್ನ ಊಹೆ ಖಂಡಿತವಾಗಿಯು ನಿಜ ಮಗಳೇ ನಾನೀ ಕಥೆ ಹೇಳುವುದಕ್ಕೆ ಬಲವಾದ ಕಾರಣವಿದೆ. ನೀನು ಕೇಳಿದ ಮಗು ಈಗ ಅತ್ಯಂತ ಸುರಕ್ಷಿತವಾಗಿದ್ದು ತನ್ನಮ್ಮನ ಮಡಿಲಿನಲ್ಲಿ ಹಾಯಾಗಿ ಮಲಗಿದ್ದಾಳೆ.

ಎಲ್ಲರಿಗೂ ಮಗುವಿನ ತಾಯಿ ಸುಧಾಮಣಿ ಈಗಾಗಲೇ ಸತ್ತಿರುವ ಬಗ್ಗೆ ಹೇಳಿದ ಗುರುಗಳು ಈಗ ನೋಡಿದರೆ ಮಗು ಅಮ್ಮನ ಜೊತೆ ಹಾಯಾಗಿ ಮಲಗಿದೆ ಎನ್ನುತ್ತಿರುವರಲ್ಲ ಎಂದು ಯೋಚಿಸುತ್ತಿದ್ದರೆ ನೀತುವಿನ ಮನಸ್ಸಿನಲ್ಲೇನೋ ಯೋಚಿಸಿ ಆತಂಕ ಮೂಡುತ್ತಿತ್ತು.

ಸ್ವಾಮೀಜಿಗಳು......ರಾಣಾಪ್ರತಾಪ್ ಮತ್ತು ಸುಧಾಮಣಿಯರ ಮುದ್ದಿನ ಕುವರಿ ಸೂರ್ಯವಂಶಿ ರಾಜಮನೆತನ ಸಂಸ್ಥಾನದಲ್ಲಿನ ಸಮಸ್ತ ಆಸ್ತಿಗೂ ಏಕೈಕ ವಾರಸುದಾರಳಾದ ಮಗು ಬೇರಾರೂ ಅಲ್ಲ ನೀತು ನಿನ್ನ ಮಡಿಲಲ್ಲಿ ಮಲಗಿರುವ ನಿಶಾ.

ಗುರುಗಳು ಹೇಳಿದ ಮಾತು ನಿಜಕ್ಕೂ ಎಲ್ಲರ ತಲೆಯ ಮೇಲೆ ಸಿಡಿಲು ಬಡಿದಂತಾಗಿದ್ದರೆ ನೀತು ಮಡಿಲಲ್ಲಿ ನಿಶ್ಚಿಂತೆಯಿಂದ ಮಲಗಿರುವ ಮಗಳ ತಲೆ ಸವರುತ್ತ ಆಕೆಯ ಜನ್ಮರಹಸ್ಯ ತಿಳಿದು ದುಃಖದಿಂದ ಕಣ್ಣೀರು ಸುರಿಸುತ್ತಿದ್ದಳು. ಹುಟ್ಟಿದಾಕ್ಷಣ ತಾಯಿಯ ಎದೆ ಹಾಲನ್ನೂ ಕುಡಿಯಲಾಗದೆ ಅವಳನ್ನು ಕಳೆದುಕೊಂಡು ಅಪ್ಪನ ಬೆಚ್ಚನೆಯ ಅಪ್ಪುಗೆಯಿಂದಲೂ ಅತೀ ಶೀಘ್ರದಲ್ಲೇ ವಂಚಿತಳಾಗಿ ಕೊನೆಗೆ ತನ್ನ ಮಡಿಲಿಗೆ ಸೇರಿದ ಮಗು ಸುರ್ಯವಂಶಿ ರಾಜಮನೆತನದ ಕಡೆಯ ಕುವರಿ ಎಂದು ತಿಳಿದು ನೀತು ಹೃದಯದಲ್ಲುಂಟಾದ ವೇದನೆಯು ಕಂಬನಿ ರೂಪದಲ್ಲಿ ಹರಿಯತೊಡಗಿತು. ಅಮ್ಮನ ಕಣ್ಣೀರು ಮುಖದ ಮೇಲೆ ಬಿದ್ದಾಗ ಎಚ್ಚರಗೊಂಡ ನಿಶಾ ಅಮ್ಮ ಅಳುತ್ತಿರುವುದನ್ನು ಕಂಡು ಅವಳ ಕಣ್ಣೀರನ್ನೊರೆಸಿ ಮುತ್ತಿಟ್ಟು ಬಿಗಿದಪ್ಪಿಕೊಂಡಳು. ತನ್ನ ಸುತ್ತಲೂ ಕುಳಿತಿದ್ದ ಅಪ್ಪ....ಅಂಕಲ್.....ಆಂಟಿ...ಅಜ್ಜಿ ಸೇರಿದಂತೆ ಎಲ್ಲರ ಕಣ್ಣಲ್ಲೂ ಕಂಬನಿ ಹರಿಯುತ್ತಿರುವುದನ್ನು ಕಂಡ ನಿಶಾ ನೇರ ಅಪ್ಪನ ಹೆಗಲಿಗೇರಿ ಅವನ ಕೆನ್ನೆಗೆ ಮುತ್ತಿಟ್ಟು ಪುನಃ ಅಮ್ಮನ ಮಡಿಲಿಗೆ ಸೇರಿಕೊಂಡಳು.

ಸ್ವಾಮೀಜಿ......ಮಗಳೇ ನೀತು ಈ ನಿನ್ನ ಕಂದಮ್ಮ ಪ್ರಪಂಚದೆದುರು ನಿನ್ನ ಮಗಳ ರೂಪದಲ್ಲಿಯೇ ಗುರುತಿಸಿಕೊಳ್ಳುತ್ತಾಳೆ ಅದರ ಬಗ್ಗೆ ನಿನಗ್ಯಾವುದೇ ಸಂಶಯ ಬಾರದಿರಲಿ. ಆದರೆ ಸೂರ್ಯವಂಶಿಗಳ ರಾಜಮನೆತನದಲ್ಲಿ ಹುಟ್ಟಿದ ಇವಳಿಗೆ ತನ್ನದೇ ಆದ ಕೆಲವು ಕರ್ತವ್ಯ ಇದೆ ಅದನ್ನು ನಿಭಾಯಿಸಲೇಬೇಕಲ್ಲವಾ. ಮುಂದಿನ ವಿಷಯದ ಬಗ್ಗೆ ಶಿವರಾತ್ರಿಯ ಪೂಜೆ ಮುಗಿದ ನಂತರ ಸವಿಸ್ತಾರವಾಗಿ ಮನೆಯಲ್ಲೇ ಮಾತನಾಡೋಣ. ಅಲ್ಲಿಯವರೆಗೆ ನಾನು ಈ ದೇವಸ್ಥಿನದಲ್ಲಿಯೇ ವಾಸ್ತವ್ಯ ಇರುತ್ತೇನೆ ಶಿವರಾತ್ರಿಯ ದಿನ ಮುಂಜಾನೆ ಐದು ಘಂಟೆಗೆ ಮನೆಗೆ ಬರುವೆ ಈಗ ಎಲ್ಲರೂ ಹೊರಡಿ.

ನಿಶಾಳ ಬಗ್ಗೆ ತಿಳಿದು ಎಲ್ಲರೂ ಭಾರವಾದ ಹೃದಯದೊಂದಿಗೆ ಹೊರ ನಡೆದರೆ ಎಲ್ಲರಿಗಿಂತ ಹೆಚ್ಚು ದುಃಖಿತಳಾಗಿದ್ದ ನೀತು ಮಗಳನ್ನೊಂದು ಕ್ಷಣಕ್ಕೂ ತನ್ನಿಂದ ದೂರ ಮಾಡದೆ ಪ್ರಪಂಚದಿಂದ ಬಚ್ಚಿಡುತ್ತಿರುವ ರೀತಿ ಅಪ್ಪಿಕೊಂಡಿದ್ದಳು. ನೀತುವಿನ ಮನಸ್ಥಿತಿಯ ಬಗ್ಗೆ ಚೆನ್ನಾಗಿ ಅರಿತಿದ್ದ ಹರೀಶ ಯಾರಿಗೂ ಅಮ್ಮ ಮಗಳ ಹತ್ತಿರ ಹೋಗಬೇಡಿರಿ ಸ್ವಲ್ಪ ಹೊತ್ತು ಇಬ್ಬರೂ ಒಂಟಿಯಾಗಿರಲಿ ಎಂದೇಳಿ ಗಂಡಸರೊಟ್ಟಿಗೆ ಮಗಳ ವಿಷಯದ ಬಗ್ಗೆ ಚರ್ಚಿಸುತ್ತ ಕುಳಿತರೆ ಹೆಂಗಸರೂ ಅದನ್ನೇ ಮಾಡತೊಡಗಿದರು. ನಿಶಾಳನ್ನು ಹದಿನೈದು ಮೊಲಗಳು ಸುತ್ತಲಿಂದ ಸುತ್ತವರಿದು ನಿಂತಿರುವುದು ಆಕೆಗೆ ತುಂಬ ಖುಷಿಯಾಗುತ್ತಿದ್ದು..... ಮಮ್ಮ....ಮಮ್ಮ.....ನೊಲ.....ಎಂದವುಗಳ ತಲೆ ಸವರಿ ತುಂಬಾ ಸಂಭ್ರಮಿಸುತ್ತಿದ್ದಳು. 

ಸಹಸ್ರಾರು ಕೋಟಿಗಳ ಸಮಸ್ತ ಆಸ್ತಿಗೆ ಏಕೈಕ ವಾರಸುದಾರಳಾದ ಮಗಳು ತನ್ನ ಮಡಿಲಿಗೆ ಸೇರುವುದಕ್ಕೆ ಮುಂಚೆ ಅನಾಥಾಶ್ರಮದಲ್ಲಿ ಒಂಟಿಯಾಗಿದ್ದಳೆಂದು ನೆನೆದು ನೀತು ಕಣ್ಣಿಂದ ಧಾರಾಕಾರವಾಗಿ ಕಂಬನಿ ಸುರಿಯತೊಡಗಿತು. ನಿಶಾ ಮೊಲಗಳ ಜೊತೆ ಆಡುತ್ತ ಅಮ್ಮನ ಕಡೆ ತಿರುಗಿದಾಗ ಅವಳಿನ್ನೂ ಅಳುವುದನ್ನು ಕಂಡು ತಾನೂ ಅಮ್ಮನನ್ನು ಅಪ್ಪಿಕೊಂಡು ಕಣ್ಣಿನಿಂದ ಮುತ್ತಿನ ಹನಿ ಉದುರಿಸತೊಡಗಿದಳು. ನೀತು ಮಗಳ ಕಣ್ಣಲ್ಲಿ ನೀರು ಕಂಡು ತನ್ನ ಮನಸ್ಸಿನೊಳಗಿನ ವೇದೆಯನ್ನು ಬದಿಗೊತ್ತಿ ಅವಳನ್ನು ಮುದ್ದಿಸುತ್ತ

.......ಚಿನ್ನಿ ಅಳಬಾರದು ಪುಟ್ಟಿ ನೋಡಲ್ಲಿ ನಿನ್ನ ಫ್ರೆಂಡ್ ಮೊಲಗಳು ನಿನ್ನನ್ನೇ ಕೂಗುತ್ತಿವೆ ಅವುಗಳಿಗೆ ಕ್ಯಾರೆಟ್ ತಿನ್ನಿಸುವುದಿಲ್ಲವಾ ? ಎಂದಾಗಲೇ ನಿಶಾಳ ತುಟಿಯಲ್ಲೂ ಮುಗುಳ್ನಗೆ ಮೂಡಿತು.

ನೀತು ಗಂಡನನ್ನು ಕೂಗಿ.....ರೀ ಕ್ಯಾರೆಟ್ ತೆಗೆದುಕೊಂಡು ಬನ್ನಿ ಇಲ್ಲಿ ಚಿನ್ನಿಯ ಫ್ರೆಂಡ್ಸ್ ಕಾಯುತ್ತಿದ್ದಾರೆ.

ಹರೀಶ ಕ್ಯಾರೆಟ್ ಹಿಡಿದು ಬಂದಾಗ ಅದನ್ನು ತಾನೇ ಪಡೆದ ನಿಶಾ....
ಪಪ್ಪ....ನಾನು....ನಾನು.....ಎಂದು ಮೊಲಗಳಿಗೆ ನೀಡುತ್ತ ಸಂತಸದ ಕಿಲಕಾರಿ ಹಾಕುತ್ತಿದ್ದಳು.

ಶೀಲಾ ಊಟ ತಂದಾಗ ನೀತು ತನಗೆ ಬೇಡ ಯಾಕೋ ಮನಸ್ಸು ಸರಿಯಿಲ್ಲ ಎಂದರೆ ನಿಶಾ ತನ್ನ ಕಿರಿಯತ್ತೆ ಪ್ರೀತಿಯ ಕೈಯಿಂದ ತುತ್ತು ಹಾಕಿಸಿಕೊಂಡು ತಿನ್ನಿಸಿಕೊಳ್ಳುತ್ತಿದ್ದಳು.

ಹರೀಶ......ನೀತು ಈ ಕ್ಷಣದಲ್ಲಿ ನಿನ್ನ ಮನಸ್ಸಿಗೆಂತ ಆಘಾತವಾಗಿದೆ ಎಂದು ನನಗೆ ಅರ್ಥವಾಗುತ್ತೆ ಆದರೆ ಮಕ್ಕಳ ಬಗ್ಗೆ ಯೋಚಿಸು. ನಿಶಾಳನ್ನು ಹೆತ್ತವರು ಸುಧಾಮಣಿಯೇ ಆಗಿದ್ದರೂ ಅವಳಿಗೆ ತಾಯಿ ಪ್ರೀತಿ ಸಿಕ್ಕಿದ್ದು ನಿನ್ನಂದ. ಅವಳ ಯೋಗಕ್ಷೇಮದ ಜೊತೆಗೇ ಮಿಕ್ಕ ಮಕ್ಕಳ ಬಗ್ಗೆಯೂ ಯೋಚಿಸು ಅವರ ಜವಾಬ್ದಾರಿ ನಿನ್ನ ಮೇಲಿದೆ. ನೀನೀಗೆ ಊಟ ಬೇಡವೆಂದರೆ ನಿನ್ನ ಆರೋಗ್ಯ ಹದಗೆಡುತ್ತೆ ಅದನ್ನು ನೋಡಿ ಚಿನ್ನಿಯ ಜೊತೆ ಮಿಕ್ಕ ಮಕ್ಕಳೂ ಸಪ್ಪಗಾಗುತ್ತಾರೆ. ಚಿನ್ನಿ ಸಪ್ಪಗಿರುವುದನ್ನು ನಿನ್ನಿಂದ ನೋಡಲು ಸಾಧ್ಯವಿದೆಯಾ ?

ನೀತು......ಇಲ್ಲಾರೀ ನನ್ನ ಮಗಳಾಗಲಿ ಇನ್ಯಾವ ಮಕ್ಕಳೇ ಆಗಿರಲಿ ಪ್ರತೀಕ್ಷಣವೂ ನಗುತ್ತಲೇ ಇರಬೇಕು. ಹಿಂದೇನೇ ನಡೆದಿದ್ದರೂ ಸರಿ ಅದರ ಬಗ್ಗೆ ಯೋಚಿಸುವ ಬದಲು ಮುಂದೇನು ಮಾಡಬೇಕೋ ಅದನ್ನು ಕಾರ್ಯರೂಪಕ್ಕೆ ತರಬೇಕು. ಇಂದಿನಿಂದ ಅವಳೆಷ್ಟಾದರೂ ಕೀಟಲೆ ಮಾಡಲಿ ನಾನು ತಡೆಯುವುದಿಲ್ಲ ಬನ್ನಿ ಎಲ್ಲರ ಬಳಿಯೇ ಹೋಗಿ ಕೂರೋಣ.

ನೀತು ಎಲ್ಲರ ಹತ್ತಿರ ತೆರಳಿ ತಾನು ಮಗಳೊಂದಿಗೆ ಒಂಟಿಯಾಗಿ ಕುಳಿತ ಬಗ್ಗೆ ಅವರಲ್ಲಿ ಕ್ಷಮೆ ಕೇಳಿದಳು.

ರೇವತಿ.....ನಿನ್ನದೇನೂ ತಪ್ಪಿಲ್ಲ ಕಣೆ ಚಿನ್ನಿಯ ಬಗ್ಗೆ ತಿಳಿದು ನಮಗೂ ತುಂಬ ಬೇಸರವಾಯಿತು ಆದರೆ ನೀನವಳ ತಾಯಿ ನಿನಗೆ ಎಲ್ಲರಿಗೆ ಆಗಿರುವ ದುಃಖಕ್ಕಿಂತ ಹೆಚ್ಚೇ ಆಗಿರುವುದು ಗೊತ್ತಿದೆ. ಎಲ್ಲ ವಿಷಯ ಬದಿಗೊತ್ತಿ ನನ್ನ ಮೊಮ್ಮಗಳನ್ನು ಚೆನ್ನಾಗಿ ನೋಡಿಕೊಳ್ಳುವುದರತ್ತ ನಿನ್ನ ಗಮನ ಹರಿಸು ಎಲ್ಲವೂ ಒಳ್ಳೆಯದೇ ಆಗಲಿದೆ. ಮುಂದೇನು ಮಾಡಬೇಕೆಂದು ಗುರುಗಳೇ ಹೇಳುತ್ತಾರೆ ಅಲ್ಲಿಯವರಗೆ ನೀನು ಸಮಿಧಾನವಾಗಿರು ನಡಿ ಮೊದಲು ಊಟ ಮಾಡುವಿಯಂತೆ.

ನಿಶಾಳ ಜೊತೆ ಅಣ್ಣಂದಿರು ಅಕ್ಕಂದಿರೆಲ್ಲಾ ಸೇರಿಕೊಂಡು ಅವಳನ್ನೂ ಆಡಿಸುತ್ತ ತಾವೂ ಮೊಲಗಳೊಟ್ಟಿಗೆ ಆಡುತ್ತಿದ್ದರು. ಸಂಜೆ ಹೊತ್ತಿಗೆ ಮನೆಯತ್ತ ಹೊರಟಾಗ ಹರೀಶ ಮಗಳಿಂದ ಎಲ್ಲಾ ಮೊಲಗಳಿಗೂ ಕ್ಯಾರೆಟ್ ಕೊಡಿಸಿ ಅವುಗಳನ್ನು ಬೀಳ್ಕೊಟ್ಟು ಬಸ್ಸೇರಿದನು. ನಿಶಾ ತುಂಬ ಕುಣಿದಾಡಿದ ಕಾರಣ ಆಕಳಿಸುತ್ತಿದ್ದು ಯಾರೇ ಕರೆದರೂ ಅವರತ್ತ ಹೋಗದೆ ಮಮ್ಮ....ಮಮ್ಮ......ಎನ್ನುತ್ತ ನೀತು ಕುಳಿತಿದ್ದ ಸೀಟಿಗೆ ಬಂದವಳೇ ಮಡಿಲನ್ನೇರಿ ತಬ್ಬಿಕೊಂಡು ನಿದ್ರೆಗೆ ಜಾರಿದಳು. ಮನೆ ತಲುಪಿದಾಗಲೂ ನಿದ್ರಿಸುತ್ತಿದ್ದ ಮಗಳ ಕನ್ನೆ ಸವರಿ......ಚಿನ್ನಿ ಏಳಮ್ಮ ಕಂದ ನೋಡು ನಮ್ಮನೆಗೆ ಬಂದೆವು ಈಗ ಸ್ವಲ್ಪ ಊಟ ಮಾಡಿ ಆಮೇಲೆ ಮಲಗುವಿಯಂತೆ. ನಿಶಾ ಆಕಳಿಸುತ್ತಲೇ ಕಣ್ತೆರೆದು ಅಪ್ಪನ ಹೆಗಲಿಗೇರಿ.......ಪಪ್ಪ ನಡಿ ಕುಕ್ಕಿ.....ಲಾಲ ಕೊಲು ಎಂದರೆ ನೀತು ನಗುತ್ತ.......ನೋಡಿ ಅಮ್ಮ ಇಷ್ಟೊತ್ತೂ ಮೊಲಗಳ ಜೊತೆಗೆ ಆಡುತ್ತಿದ್ದಳು ಮನೆ ತಲುಪಿದಾಕ್ಷಣ ಇವಳಿಗೆ ಕುಕ್ಕಿಯ ಜ್ಞಾಪಕವೂ ಬಂದಿದೆ. ಚಿನ್ನಿ ಕುಕ್ಕಿ ಇಲ್ಲಿಲ್ಲ ಕಂದ ನಾಳೆ ಜಾನಿ ಅಂಕಲ್ ತೋಟಕ್ಕೆ ಹೋಗಿ ಕುಕ್ಕಿಯ ಜೊತೆ ಆಡಿಕೊಂಡು ಬರುವಿಯಂತೆ ಆಯ್ತಾ.

ಮಾರನೆಯ ದಿನ ಬೆಳಿಗ್ಗೆಯೇ ಕಿರಿಯ ಸೋದರಮಾವ ರೇವಂತ್ ಜೊತೆಯಲ್ಲಿ ಜಾನಿಯ ತೋಟಕ್ಕೆ ಹೋಗಲು ರೆಡಿಯಾಗಿ ನಿಂತಿದ್ದ ನಿಶಾ ಕುಕ್ಕಿಯನ್ನು ನೋಡುವ ಉತ್ಸಾಹದಲ್ಲಿದ್ದಳು.

ನೀತು.....ಗಿರೀಶ—ಸುರೇಶ ನಿಮ್ಮ ತಂಗಿಯ ಜವಾಬ್ದಾರಿ ನಿಮ್ಮದು ಅವಳಿಗೇನಾದರೂ ಪೆಟ್ಟಾದರೆ ನಿಮ್ಮಿಬ್ಬರನ್ನಿಲ್ಲಿ ತಲೆಕೆಳಗಾಗಿ ಮಾಡಿ ನೇತಾಕುವೆ ಸುರೇಶ ನೀನವಳ ಜೊತೆ ಕೀಟಲೆ ಮಾಡಬೇಡ.

ಸುರೇಶ.....ಅಮ್ಮ ನಾನೇನೂ ಮಾಡಲೇ ಇಲ್ಲವಲ್ಲ.

ನೀತು.....ಏನೂ ಮಾಡದಿದ್ದರೇನೇ ಒಳ್ಳೆಯದು ತಂಗಿ ಜೋಪಾನ.

ರೇವಂತ್.....ನೀನೇನು ಚಿಂತಿಸಬೇಡ ತಂಗಿ ಚಿನ್ನಿಯ ಜೊತೆ ನಾನೇ ಇರುತ್ತೀನಲ್ಲ ಅವಳಿಗೆ ಪೆಟ್ಟಾಗದ ರೀತಿ ಆಡಿಸುವೆ ಸರಿಯಾ.

ನಿಶಾ ಅಣ್ಣಂದಿರ ಶರ್ಟನ್ನೆಳೆಯುತ್ತ.....ಅಣ್ಣ ಬಾ ಕುಕ್ಕಿ....ಕುಕ್ಕಿ ಬಾ ಮಮ್ಮ ಟಾಟಾ....ಎಂದೇಳಿ ನೀತು ಕೆನ್ನೆಗೊಂದು ಮುತ್ತಿಟ್ಟು ಪುನಃ ಹೊರಗೋಡಿ ಮಾವನ ಹೆಗಲಿಗೇರಿಕೊಂಡಳು.ಹಿರಿಯತ್ತಿಗೆ ಸುಮ
........ಇವಳಂತು ಬುಲೆಟ್ ಟ್ರೈನಿನಲ್ಲಿ ಕುಳಿತಂತೆ ಆಡುತ್ತಿದ್ದಾಳೆ ತನ್ನ ಕುಕ್ಕಿ ಮರಿಯನ್ನು ನೋಡಲು.....ಎಂದು ಅತ್ತಿಗೆ ನಾದಿನಿ ನಕ್ಕರು.

ಜಾನಿ ತೋಟದಲ್ಲಿದ್ದ ಅಷ್ಟು ಪುಟ್ಟ ನಾಯಿ ಮರಿಯನ್ನು ನೋಡುತ್ತ ರಶ್ಮಿ....ನಯನ....ದೃಷ್ಟಿ.....ಅಚ್ಚರಿಗೊಂಡಿದ್ದರೆ ನಿಶಾ ಅದರ ತಲೆ ಸವರುತ್ತ ಅಕ್ಕಂದಿರಿಗೆ ತನ್ನದೇ ಭಾಷೆಯಲ್ಲಿ ನಾಯಿಯ ಬಗ್ಗೆ ಏನೋ ಹೇಳುತ್ತಿದ್ದಳು. ಮಧ್ಯಾಹ್ನದವರೆಗೂ ತೋಟದಲ್ಲಿಯೇ ಮನೆಯ ಮಕ್ಕಳೆಲ್ಲರೂ ಕಾಲಕಳೆದು ಹೊರಟಾಗ ನಿಶಾ ಮಾವನಿಗೆ ಐಸ್....ಐಸ್....ಎಂದು ಪೀಡಿಸಿ ಎರಡು ಐಸ್ ಕ್ರೀಂ ತಿಂದಳು. ಮನೆಯಲ್ಲಿ ನಾಳಿನ ಶಿವರಾತ್ರಿಯ ಪೂಜೆಗೆ ಎಲ್ಲಾ ಸಿದ್ದತೆಗಳನ್ನು ಅಚ್ಚುಕಟ್ಟಾಗಿ ಹಿರಿಯರೆಲ್ಲ ಸೇರಿ ಪೂರೈಸಿದ್ದರು. 

ರೇವಂತ್ ಜೊತೆ ಮಕ್ಕಳು ಮನೆಗೆ ಹಿಂದಿರುಗಿದಾಗ ಕುಣಿದಾಡಿ ಸುಸ್ತಾಗಿದ್ದ ನಿಶಾ ಒಳಗಡಿ ಇಡುತ್ತಲೇ ಸೋಫಾ ಮೇಲೇರಲು ಸುತ್ತ ನೋಡಿದರೆ ಇಡೀ ಲಿವಿಂಗ್ ಹಾಲೇ ಖಾಲಿ ಖಾಲಿಯಾಗಿತ್ತು. ರೂಮಿನೊಳಗೋಡಿದ ನಿಶಾ ತನ್ನ ಪುಟ್ಟ ದಿಂಬನ್ನೆಳೆದುಕೊಂಡು ಬಂದು ಹಾಲ್ ನೆಲದಲ್ಲಿ ದಬ್ಬಾಕಿಕೊಂಡು ಮಲಗಿಬಿಟ್ಟಳು. ಕೆಳಗಿನ ಹಾಲಿನ ಫರ್ನೀಚರುಗಳನ್ನು ಮೇಲ್ಮನೆಗೆ ಸಾಗಿಸಿ ಕೆಳಗೆ ಬಂದ ಹರೀಶ ಮಗಳು ನೆಲದಲ್ಲೇ ಮಲಗಿರುವುದನ್ನು ಕಂಡು ಹೆಂಡತಿಯನ್ನು ಕೂಗಿ ಮಗಳನ್ನು ತೋರಿಸುತ್ತ ಗದರಿದನು. ನಿಶಾಳ ಅಕ್ಕಪಕ್ಕ ಸುರೇಶ—ನಯನ ಮಲಗಿದ್ದರೆ ರಶ್ಮಿ....ಗಿರೀಶ....ದೃಷ್ಟಿ....ನಮಿತ ಮತ್ತು ನಿಕಿತಾ ಗೋಡೆಗೊರಗಿ ಕಾಲು ಚಾಚಿಕೊಂಡು ಕುಳಿತಿದ್ದರು. ನೀತು ಗಂಡನಿಂದ ಗದರಿಸಿಕೊಂಡು ಮಗಳಿಗೆ ನಡೀ ಪುಟ್ಟಿ ರೂಮಿನಲ್ಲಿ ಮಲಗೆಂದರೂ ಅವಳು ಸುತಾರಾಂ ಒಪ್ಪದೇ ಅಪ್ಪನಿಗೆ ಪಾನ್....ಪಾನ್.....ಹಾಕೆಂದು ಕೈ ತೋರಿಸುತ್ತಿದ್ದಳು.

ಹರೀಶ.......ಚಿನ್ನಿ ಆಗಲೇ ಫ್ಯಾನ್ ಹಾಕಿದೆ ಪುಟ್ಟಿ.....ಎಂದರೆ ತಲೆ ಎತ್ತಿ ಫ್ಯಾನನೊಮ್ಮೆ ನೋಡಿದ ನಿಶಾ ಪುನಃ ದಿಂಬಿನೊಳಗೆ ಮುಖ ಸೇರಿಸಿ ಮಲಗಿಬಿಟ್ಟಳು.

ಹರೀಶ....ಲೇ ಇವಳಿನ್ನೂ ಊಟ ಮಾಡಿಲ್ಲವಲ್ಲೇ.

ನೀತು.....ತೋಟದಲ್ಲಿ ಕುಣಿದಾಡಿ ಸುಸ್ತಾಗಿರುತ್ತೆ ಮಲಗಿರಲಿ ಬಿಡಿ ಎದ್ದಾಗ ಏನಾದರು ತಿಂಡಿ ತಿನ್ನಿಸುವೆ ಮಕ್ಕಳೇ ನೀವೆಲ್ಲರೂ ಊಟ ಮಾಡಲು ಏಳಿ.

ನಿಕಿತಾ......ಆಂಟಿ ತೋಟದಲ್ಲಿ ಹಣ್ಣು....ಎಳನೀರು....ಐಸ್ ಕ್ರೀಂ ತುಂಬಾನೇ ಆಗಿದೆ ಊಟ ಮಾಡಲಿಕ್ಕೆ ಇನ್ನೂ ಸ್ವಲ್ಪ ಹೊತ್ತಾಗಲಿ.

ಗಿರೀಶ......ಅಮ್ಮ ಊಟ ಆಮೇಲೆ ಈಗ ಬಿಸಿಲಲ್ಲಿ ಬಾಯಾರಿಕೆ ಆಗುತ್ತಿದೆ ಕುಡಿಯಲು ತಣ್ಣಗೇನಾದರು ಕೊಡು.

ಪ್ರೀತಿ.......ತೊಗೊಳ್ಳಿ ಮಕ್ಕಳೇ ನಿಮಗೇ ಅಂತ ಚಿಲ್ಡಿಡಿ ಕಲ್ಲಂಗಡಿ ಜ್ಯೂಸ್ ತಂದಿದ್ದೀನಿ ಆರಾಮವಾಗಿ ಕುಡಿಯಿರಿ.

ಅಷ್ಟೊತ್ತೂ ಸದ್ದೇ ಮಾಡದೆ ಮಲಗಿದ್ದ ನಿಶಾ ಜ್ಯೂಸ್ ಹೆಸರನ್ನು ಕೇಳಿದಾಕ್ಷಣ ಚಂಗನೆದ್ದು ಕುಳಿತು....ಅತ್ತಿ.....ಅತ್ತಿ....ನಂಗೆ ದೂಸ್ ಕೊಲು.....ಎಂದು ಕೈ ಚಾಚಿದಳು.

ನೀತು ಗಂಡನಿಗೆ.....ನೋಡಿ ನಿಮ್ಮ ಸುಪುತ್ರಿ ಚೆನ್ನಾಗಿಯೇ ನಾಟಕ ಮಾಡುತ್ತಾಳೆ ಜ್ಯೂಸೆಂದ ತಕ್ಷಣ ಎಂದು ಕೂತಿದ್ದಾಳೆ.

ಹರೀಶ ಮಗಳ ಪಕ್ಕ ಕುಳಿತುಕೊಂಡು......ಚಿನ್ನಿ ನಿನಗೂ ಜ್ಯೂಸ್ ಬೇಕಾ ಬಾ ಇವತ್ತು ಪಪ್ಪ ನಿನಗೆ ಜ್ಯೂಸ್ ಕುಡಿಸುತ್ತಾರೆ.....ಎಂದೇಳಿ ಮಗಳಿಗೆ ತಾನೇ ಸ್ವಲ್ಪ ಸ್ವಲ್ಪ ಜ್ಯೂಸ್ ಕುಡಿಸತೊಡಗಿದನು.

ನೀತು.....ಸುಕನ್ಯಾ—ಸವಿತಾ ನಾಳೆ ನಿಮ್ಮಿಬ್ಬರ ಗಂಡಂದಿರೂ ಇಲ್ಲಿಗೆ ಸಮಯಕ್ಕೆ ಬರಬೇಕು. ಎಲ್ಲಾ ಸತಿಪತಿಗಳೂ ಜೊತೆಯಾಗಿಯೇ ಮೊದಲು ಶಿವನ ಆರಾಧನೆ ಮಾಡಬೇಕೆಂದು ಗುರುಗಳು ಹೇಳಿದ್ದಾರೆ ಅವರಿಗೆ ಮತ್ತೊಮ್ಮೆ ಜ್ಞಾಪಿಸಿಬಿಡಿ.

1 comment:

  1. ಸಿದ್ಧಮ್ಮರಾಜ್7 June 2024 at 22:06

    ಅಬ್ಬಾ, ಕತೆ ಓದುತ್ತಾ ಇದ್ದರೆ ರೋಮಾಂಚನವಾಗುತ್ತದೆ

    ReplyDelete