ಮುಂಜಾನೆ ಮೂರು ಘಂಟೆಯಿಂದಲೇ ಮನೆಯ ಹಿರಯರೆಲ್ಲರೂ ಎದ್ದಿದ್ದು ಸ್ನಾನ ಮಾಡಿ ಶುಭ್ರಗೊಂಡ ನಂತರ ಪೂಜೆಯ ತಯಾರಿ ನಡೆಸುತ್ತಿದ್ದರು. ಹೆಂಗಸರು ಲಿವಿಂಗ್ ಹಾಲಿನಲ್ಲಿ ಬಣ್ಣಬಣ್ಣಗಳಿಂದ ಕೂಡಿದ ರಂಗೋಲಿ ಬಿಡಿಸಿ ಅದರ ನಡುವೆ ನೆನ್ನೆ ದಿನ ಗುರುಗಳು ಹರೀಶನನ್ನು ಕರೆಸಿಕೊಂಡು ನೀಡಿದ್ದ ಶಿವನ ಲಿಂಗವನ್ನು ಎತ್ತರದಲ್ಲಿ ಪೀಠದ ಮೇಲೆ ಬೆಳ್ಳಿ ತಟ್ಟೆಯೊಳಗಿಟ್ಟು ಮುಂದೆ ಬೆಳ್ಳಿಯ ದೀಪಾಲೆ ಕಂಬಗಳನ್ನು ಜೋಡಿಸಿದರು. ಐದಕ್ಕೆಲ್ಲಾ ಮಕ್ಕಳನ್ನೆಬ್ಬಿಸಿ ಅವರಿಗೂ ರೆಡಿಯಾಗುವಂತೆ ತಿಳಿಸಿ ಕೊನೆಗೆ ನೀತು ಮಗಳನ್ನು ಪುಸುಲಾಯಿಸಿ ಏಬ್ಬಿಸಿದಳು.
ಅನುಷ.....ಅಕ್ಕ ನೀವು ಕೆಲಸ ನೋಡಿಕೊಳ್ಳಿ ನಮ್ಮ ಚಿನ್ನಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ನಾನು ಕರೆತರುವೆ.
ನೀತು......ಸರಿ ಅನು ಇವಳಿಗೆ ರೇಷ್ಮೆ ಲಂಗ ಬ್ಲೌಸ್ ಹಾಕು ಇವಳ ಅಪ್ಪನಿಗೆ ಮಗಳನ್ನು ಅದೇ ಉಡುಗೆಯಲ್ಲಿ ನೋಡಬೇಕೆಂದು ಆಸೆ.
ಅನುಷ.....ಸರಿ ಅಕ್ಕ.
ಸರಿಯಾಗಿ ಏಳು ಘಂಟೆಗೆ ಮನೆಯಂಗಳಕ್ಕೆ ಬಂದ ಸ್ವಾಮೀಜಿಗಳು ತಮ್ಮೊಂದಿಗೆ ಒಂಬತ್ತು ಜನ ದಿವ್ಯ ತೇಜಸ್ಸುಳ್ಳ ಮಹಾತ್ಮರನ್ನೂ ಸಹ ಕರೆ ತಂದಿದ್ದರು
ರೇವತಿ.....ನೀತು ಹರೀಶ ಎಲ್ಲ ದಿವ್ಯಾತ್ಮರಿಗೂ ಪಾದಪೂಜೆ ಮಾಡಿ ಮನೆಯೊಳಗೆ ಆದರದಿಂದ ಬರಮಾಡಿಕೊಳ್ಳಿ.
ಅಮ್ಮ ಹೇಳಿದಂತೆ ಗಂಡನ ಜೊತೆಗೂಡಿ ನೀತು ಎಲ್ಲರ ಪಾದ ಪೂಜೆ ಮಾಡಿ ಅವರ ಆಶೀರ್ವಾದ ಪಡೆದು ಮನೆಯೊಳಗೆ ಆಹ್ವಾನಿಸಿದರು. ಸ್ವಾಮೀಜಿಗಳು ಮತ್ತವರ ಜೊತೆ ಬಂದಿರುವ ಒಂಬತ್ತು ತೇಜಸ್ವಿಗಳ ಆಶೀರ್ವಾದವನ್ನು ಮನೆಯವರೆಲ್ಲರೂ ಪಡೆದರು. ಅನುಷ ಆಂಟಿ ಜೊತೆ ರೆಡಿಯಾಗಿ ಮಾವು ಹಣ್ಣಿನ ಬಣ್ಣದ ರೇಷ್ಮೆ ಲಂಗ ಬ್ಲೌಸನ್ನು ತೊಟ್ಟು ತನ್ನ ದಟ್ಟವಾದ ಕೂದಲಿಗೆರಡು ಜುಟ್ಟನ್ನಾಕಿಸಿ ಅದಕ್ಕೆ ಪುಟ್ಟ ಗುಲಾಬಿ ಹೂ ಮುಡಿದು ತಲೆಯ ಮುಂಭಾಗದಲ್ಲಿ ಚಿಟ್ಟೆ ಆಕಾರದ ಎರಡು ಕ್ಲಿಪ್ ಸಿಕ್ಕಿಸಿ ಹಣೆಗೆ ತ್ರಿಶೂಲಾಕಾರದ ಪುಟ್ಟ ಕಾಡಿಗೆಯನ್ನು ಇಟ್ಟಾಗ ನಿಶಾ ದೇವತಾ ಮಗುವಿನಂತೆ ಕಂಗೊಳಿಸುತ್ತಿದ್ದಳು.
ಅನುಷ ಹೊರಬಂದಾಗ ಅವಳಿಗೂ ನಮಸ್ಕರಿಸಲು ಹೇಳಿದ ನೀತು ಮಗಳ ಕಡೆ ನೋಡಿದಾಗ ಮಂತ್ರಮುಗ್ದಳಾದಳು. ಜರಿಯ ಬಾರ್ಡರ್ ಇದ್ದ ಮಾವು ಹಣ್ಣಿನ ಬಣ್ಣದ ರೇಷ್ಮೆಯ ಲಂಗ ಬ್ಲೌಸಿನಲ್ಲಿ ಹಿಂದೆಂದಿಗೂ ಕಾಣದಿದ್ದಷ್ಟು ಮುದ್ದು ಮುದ್ದಾಗಿ ಕಾಣುತ್ತಿದ್ದ ಮಗಳನ್ನು ನೋಡುತ್ತ ಹರೀಶ ನೀತುರ ಕಣ್ಣಾಲಿಗಳಲ್ಲಿ ನೀರೂರಿದವು. ನಿಶಾ......ಮಮ್ಮ ಎಂದು ಕೂಗುತ್ತ ನೀತು ಹತ್ತಿರ ಓಡಿ ಬಂದು ಅವಳ ಕಾಲುಗಳನ್ನು ಹಿಡಿದು ನಿಂತು ಎದುರಿಗಿದ್ದ ಸ್ವಾಮೀಜಿಗಳತ್ತ ನೋಡುತ್ತಿದ್ದಳು.
ನೀತು.....ಚಿನ್ನಿ ಎಲ್ಲ ಗುರುಗಳಿಗೂ ನಮಸ್ಕಾರ......
ಅವಳ ಮಾತನ್ನು ಅರ್ಧದಲ್ಲೇ ತಡೆದ ದಿವ್ಯ ತೇಜಸ್ಸುಳ್ಳ ಹಿರಿಯರು ಅದರ ಅವಶ್ಯಕತೆಯಿಲ್ಲವೆಂದು ನಿಶಾಳ ತಲೆ ಸವರಿ ಹಿಂದಿಯಲ್ಲಿ.... ನಿನ್ನ ಹೆಸರೇನು ಪುಟ್ಟಿ..... ಎಂದು ಕೇಳಿದರು.ಅವರೇನು ಕೇಳಿದರು ಎಂದು ಅರ್ಥವಾಗದ ನಿಶಾ ಅವರನ್ನೊಮ್ಮೆ ದಿಟ್ಟಿಸಿ ನೋಡುತ್ತ ಅಮ್ಮನ ಕಡೆ ತಿರುಗಿ ಅವರತ್ತ ಕೈ ತೋರಿಸಿದಳು.
ರಾಜೀವ್.....ಪೂಜ್ಯರೆ ನನ್ನ ಮೊಮ್ಮಗಳ ಹೆಸರು ನಿಶಾ ಅವಳಿಗೆ ಹಿಂದಿ ಅರ್ಥವಾಗದೆ ಸುಮ್ಮನಿದ್ದಾಳೆ ಇಲ್ಲದಿದ್ದರ ಪಟಪಟ ಅಂತ ತನಗೆ ತಿಳಿದಂತೆ ಉತ್ತರಿಸುತ್ತಿದ್ದಳು.
ಆ ವ್ಯಕ್ತಿ ನಗುತ್ತ ನಿಶಾಳ ತಲೆಯ ಮೇಲೆ ಕೈಯಿಟ್ಟು ಧೀರ್ಙಕಾಲ ಸುಖ ಸಂತೋಷದಲ್ಲಿರುವಂತೆ ಆಶೀರ್ವಧಿಸಿದಾಗ ನಿಶಾ ಅವರ ಉದ್ದದ ಗಡ್ಡ ಮುಟ್ಟಿ ಮೆಲ್ಲನೆ ಎಳೆದಳು. ನೀತು ಮಗಳಿಗೆ ಹಾಗೆಲ್ಲಾ ಮಾಡದಂತೆ ಎತ್ತಿಕೊಳ್ಳಲು ಹೊರಟಾಗ ತಡೆದ ಮಹಾತ್ಮರು ನಿಶಾಳ ತಲೆ ನೇವರಿಸಿ ಹಿಂದಿಯಲ್ಲಿ......ಜಗಜನನಿಯ ಆಶೀರ್ವಾದದಿಂದ ಜನಿಸಿರುವ ಮಗು ನನ್ನ ಗಡ್ಡ ಎಳೆದರೆ ಅದಕ್ಕಿಂತ ದೊಡ್ಡ ಸೌಭಾಗ್ಯ ನಮ್ಮಂತಹವರಿಗೆ ಇನ್ನೇನು ಸಿಗಲು ಸಾಧ್ಯ. (ನೀತುಳಿಗೆ) ನಿನ್ನ ಪುಟ್ಟ ಕಂದಮ್ಮ ಅತ್ಯಂತ ತೇಜಸ್ವಿ....ಬುದ್ದಿವಂತೆ....ಧೈರ್ಯವಂತೆ ಜೊತೆಗೆ ಎಲ್ಲರನ್ನು ಪ್ರೀತಿ ಮತ್ತು ಆದರದಿಂದ ಕಾಣುತ್ತಾಳೆ. ಈ ಮಗು ನಿನ್ನ ಮಡಿಲನ್ನು ಸೇರಿರುವುದು ನಿನಗೂ ನಿನ್ನ ಕುಟುಂಬದವರಿಗೆ ಮತ್ತು ನಿಮಗೆ ಒಳ್ಳೆಯದನ್ನು ಬಯಸುವ ಎಲ್ಲರಿಗೂ ಒಳ್ಳೆಯದಾಗುತ್ತದೆ.
ಸ್ವಾಮೀಜಿಗಳು.....ಇವರು ನನ್ನ ಗುರುಗಳು ಶಿವರಾಮಚಂದ್ರ ಎಂಬ ನಾಮಧೇಯ. ಈ ದಿನ ಶಿವನ ರುದ್ರಾಭಿಶೇಕ ಹೋಮವನ್ನು ನಿಮ್ಮ ಮನೆಯಲ್ಲಿ ನಡೆಸಿಕೊಡಲು ಹಿಮಾಲಯದಿಂದ ತಾವೇ ಖುದ್ದಾಗಿ ಇಲ್ಲಿಗೆ ಆಗಮಿಸಿದ್ದಾರೆ.
ಹರೀಶ ಕೈ ಮುಗಿದು......ಗುರುಗಳೆ ನಿಮ್ಮ ಪೂಜ್ಯ ಪಾದದ ಸ್ಪರ್ಶದಿ ನಮ್ಮ ಮನೆ ಪಾವನವಾಯಿತು.
ಶಿವರಾಮಚಂದ್ರ......ನಾವಿಲ್ಲಿಗೆ ಬಂದಿದ್ದು ಹೋಮ...ಯಜ್ಞ ಮತ್ತು ನಿಮ್ಮೆಲ್ಲರಿಗೂ ಆಶೀರ್ವಧಿಸುವ ಜೊತೆಗೆ ಮುಖ್ಯವಾಗಿ ಆದಿಶಕ್ತಿಯ ವರ ಪ್ರಸಾದದಿಂದ ಜನಿಸಿರುವ ಈ ಮಗುವನ್ನು ನೋಡುವುದಕ್ಕಾಗಿ. ನೀತು ಹರೀಶ ಪೂಜೆ ಮುಗಿದ ನಂತರ ನಾನು ನಿಮ್ಮಿಬ್ಬರೊಡನೆ ಏಕಾಂತದಲ್ಲಿ ಮಾತನಾಡಬೇಕಿದೆ ಅದಕ್ಕೆ ವ್ಯವಸ್ಥೆ ಮಾಡಿರಿ.
ನೀತು......ಗುರುಗಳೇ ನಿಮ್ಮ ಆಜ್ಞೆ ತಪ್ಪದೆ ಪಾಲಿಸುತ್ತೇವೆ ನೀವು ಮನೆಯೊಳಗೆ ದಯಮಾಡಿಸಬೇಕು.
ಪೂಜೆಗೆ ಆಹ್ವಾನ ನೀಡಿದ್ದವರೆಲ್ಲರೂ ಸಕುಟುಂಬ ಸಮೇತರಾಗಿಯೆ ಬಂದಿದ್ದು ಸುಮಾರು 150 ಜನರು ಸೇರಿದ್ದರು. ಶಿವರಾಮಚಂದ್ರರು ಅದನ್ನು ನೋಡಿ......ಪ್ರತಿಯೊಬ್ಬರೂ ರುದ್ರಾಭಿಶೇಕ ಹೋಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿ ಮನೆಯೊಳಗೆ ಎಲ್ಲರಿಗೂ ಕೂರಲು ಸ್ಥಳಾವಕಾಶದ ಕೊರತೆ ಆಗಲಿದೆ. ಮನೆಯ ಅಂಗಳ ದೊಡ್ಡದಾಗಿ ಇರುವುದರಿಂದ ಇಲ್ಲಿಯೇ ಯಜ್ಞ ಕುಂಡ ಸ್ಥಾಪಿಸುವಂತೆ.....ತಮ್ಮ ಶಿಷ್ಯ ವೃಂಧಕ್ಕೆ ಆಜ್ಞಾಪಿಸಿದರು.
ಶಿವರಾಮಚಂದ್ರರ ಆದೇಶದಂತೆ ಅವರ ಶಿಷ್ಯರ ಜೊತೆಗೆ ಮನೆಯ ಸದಸ್ಯರೂ ಸಹಾಯಹಸ್ತ ಚಾಚಿ ಮನೆ ಪಕ್ಕದಲ್ಲಿನ ವಿಶಾಲವಾದ ಅಂಗಳದಲ್ಲಿ ಯಜ್ಞಕುಂಡ ಸ್ಥಾಪನೆ ಮಾಡಿ ಹೋಮದ ಸಿದ್ದತೆಗಳನ್ನ ಪೂರ್ಣಗೊಳಿಸುತ್ತಿದ್ದರು. ಅಷ್ಟರಲ್ಲೇ ಪ್ರತಾಪ್ ಪೆಂಡಾಲಿನವರಿಗೆ ಫೋನ್ ಮಾಡಿ ಇನ್ನಷ್ಟು ಜಮಕಾನಗಳನ್ನು ತರಿಸಿ ಎಲ್ಲರು ಕುಳಿತು ಪೂಜೆಯಲ್ಲಿ ಭಾಗವಹಿಸಲು ಅನುಕೂಲ ಮಾಡಿಸಿದ್ದನು.
ಶಿವರಾಮಚಂದ್ರ.....ಹೋಮ ಮತ್ತು ಪೂಜೆ ಸುಮಾರು ನಾಲ್ಕರಿಂದ ನಾಲ್ಕುವರೆ ಘಂಟೆಗಳ ಕಾಲ ನಡೆಯಲಿದೆ ಅಲ್ಲಿಯವರೆಗೆ ಹಸಿದು ಕುಳಿತುಕೊಳ್ಳಲು ಆಗದಿದ್ದವರು ಪೂಜೆ ಪ್ರಾರಂಭಿಸುವ ಮುನ್ನವೇ ತೆರಳಲು ಅನುಮತಿಯಿದೆ. ಒಮ್ಮೆ ಯಜ್ಞ ಪ್ರಾರಂಭವಾದ ನಂತರ ಯಾರಿಗೂ ಸಹ ಕುಳಿತಲ್ಲಿಂದ ಕದಲುವ ಅವಕಾಶ ಇರುವುದಿಲ್ಲ ಚಿಕ್ಕ ಮಕ್ಕಳನ್ನು ಹೊರತುಪಡಿಸಿ.
ಈ ವಿಶಿಷ್ಟವಾದ ಯಜ್ಞದಲ್ಲಿ ಪ್ರತಿಯೊಬ್ಬರೂ ಮೊದಲನೇ ಬಾರಿ ಪಾಲ್ಗೊಳ್ಳುತ್ತಿದ್ದು ತಿಂಡಿ ತಿನ್ನದೆಯೇ ಆಗಮಿಸಿದ್ದು ಅದೇ ವಿಧದಲ್ಲಿ ಪೂಜೆ ಸಂಪನ್ನಗೊಳ್ಳುವ ತನಕ ಉಳಿಯಲು ನಿರ್ಧರಿಸಿದರು.
ಮೊದಲಿಗೆ ನಿಶಾ ಜೊತೆಗೂಡಿ ಹೋಮ ಕುಂಡಕ್ಕೆ ಮತ್ತು ಲಿಂಗಕ್ಕೆ ನೀತು ಹರೀಶರಿಂದ ಪೂಜೆ ಮಾಡಿಸಿದ ಶಿವರಾಮಚಂದ್ರ ಗುರುಗಳು ನಂತರ ಆಹ್ವಾನಿತ ದಂಪತಿಗಳನ್ನು ಒಬ್ಬೊಬ್ಬರ ಜೋಡಿಗಳನ್ನಾಗಿ ಕರೆದು ಕುಂಡದ ಪಕ್ಕದಲ್ಲಿ ಕೂರಿಸಿ ಪೂಜೆ ಮಾಡಿಸಿದ ನಂತರ ನೀತು ಹರೀಶ ದಂಪತಿಗಳಿಂದ ಯಜ್ಞ ಆರಂಭಿಸಿದರು. ಮೊದಲಿಗೆ ಅಪ್ಪನ ತೊಡೆಯ ಮೇಲೆ ಕುಳಿತಿದ್ದ ನಿಶಾ ಅಪ್ಪ ಯಜ್ಞ ಕುಂಡಕ್ಕೆ ತುಪ್ಪವನ್ನು ಹಾಕಲು ಕೈ ಎತ್ತುವಾಗ ತಾನೂ ಅಪ್ಪನ ಕೈ ಹಿಡಿದುಕೊಳ್ಳುತ್ತಿದ್ದು ಬಳಿಕ ಬೇಸರವಾಗಿ ಅಮ್ಮನ ಮಡಿಲಿಗೇರಿಕೊಂಡಳು. ಶಿವರಾಮ ಚಂದ್ರರು....ಸ್ವಾಮೀಜಿ ಮತ್ತು ಶಿಷ್ಯಂದಿರ ಬಾಯಲ್ಲಿ ಸ್ಪಷ್ಟವಾದಂತ ಮಂತ್ರೋಚ್ಚಾರದಿಂದ ಇಡೀ ವಾತಾವರಣವೇ ಶಿವಮಯವಾಗಿತ್ತು.
ಯಜ್ಞದಲ್ಲಿ ಕುಳಿತಿದ್ದ ಪ್ರತಿಯೊಬ್ಬರೂ ತನ್ಮಯತೆಯಿಂದ ಲೀನರಾಗಿ ಶಿವನ ಆರಾಧನೆ ಮಾಡುತ್ತಿದ್ದರು. ಎರಡು ಘಂಟೆಗಳ ಕಾಲ ಅಮ್ಮನ ಮಡಿಲಿನಲ್ಲಿ ಕುಳಿತು ಯಾಗವನ್ನು ನೋಡುತ್ತಿದ್ದ ನಿಶಾಳಿಗೆ ಹೊಟ್ಟೆ ಹಸಿಯಲಾರಂಭಿಸಿ ಅಮ್ಮನಿಗೆ ಬಾಯನ್ನು ತೋರಿಸಿ ತನಗೇನಾದ್ರು ತಿನ್ನಿಸುವಂತೆ ಕೇಳಿದಳು. ನೀತು ಮಗಳಿಗೆ ಆಮೇಲೆಂದೆ ಸಮಾಧಾನ ಮಾಡುತ್ತಿರುವುದನ್ನು ಗಮನಿಸಿದ ಶಿವರಾಮ ಚಂದ್ರರು ಮಂತಗಳ ಉಚ್ಚಾರವನ್ನು ಮುಂದುವರಿಸುತ್ತಲೇ ನೈವೇಧ್ಯಕ್ಕೆಂದು ಇಡಲಾಗಿದ್ದ ಎರಡು ಲಾಡು ಮತ್ತೊಂದು ಆಪಲ್ ಅವಳ ಕೈಗಿಟ್ಟು ತಿನ್ನುವಂತೆ ಸನ್ನೆ ಮಾಡಿದರು. ನಿಶಾ ಅಮ್ಮನ ಕಡೆಗೊಮ್ಮೆ ನೋಡಿ ಅವರಿಂದ ಲಾಡು ಮತ್ತು ಹಣ್ಣನ್ನು ಪಡೆದು ತಿನ್ನುತ್ತಲೇ ಯಜ್ಞ ನೋಡುತ್ತಿದ್ದಳು.
ಯಜ್ಞವು ಅಂತಿಮ ಹಂತಕ್ಕೆ ತಲುಪಿದಾಗ ಹರೀಶ ನೀತು ಇಬ್ಬರಿಂದ ಮೊದಲು ಯಜ್ಞಕ್ಕೆ ಆಹುತಿ ಕೊಡಿಸಿ ನಂತರ ಮಿಕ್ಕ ದಂಪತಿಗಳಿಂದ ಆಹುತಿಯನ್ನು ಸಮರ್ಪಣೆ ಮಾಡಿಸಿದರು. ಮದುವೆಯಾಗದಿರುವ ಹುಡುಗ ಹುಡುಗಿಯರ ಮತ್ತು ಮಕ್ಕಳ ಕೈಯಿಂದ ಪ್ರತ್ಯೇಕವಾಗಿಯೇ ಆಹುತಿ ಕೊಡಿಸಿದ ನಂತರ ಕೊನೆಯದಾಗಿ ನಿಶಾಳಿಂದ ರೇಷ್ಮೆ ಸೀರೆ ಅಗ್ನಿಗೆ ಆಹುತಿ ಕೊಡಿಸಲು ಹೆಳಿದರು. ನಿಶಾ ಅಷ್ಟರಲ್ಲಾಗಲೇ ತಾನು ಅಮ್ಮನ ಮಡಿಲಿನಲ್ಲಿ ನಿದ್ದೆಗೆ ಜಾರಿಕೊಂಡಿದ್ದು ನೀತು ಮಗಳನ್ನು ಏಬ್ಬಿಸಿ ಗಂಡನ ಜೊತೆಗೂಡಿ ಮಗಳಿಂದ ರೇಷ್ಮೆ ಸೀರೆಯನ್ನು ಯಜ್ಞ ಕುಂಡಕ್ಕೆ ಆಹುತಿ ಕೊಡಿಸಿದಳು. ಆ ಕ್ಷಣ ಆಶ್ಚರ್ಯವೆಂಬಂತೆ ಯಜ್ಞ ಕುಂಡದ ಅಗ್ನಿಯು ಧಗಧಗನೆ ಪ್ರಜ್ವಲಿಸುತ್ತ ಉರಿಯಲಾರಂಭಿಸಿತು.
ದೇವನಾಂದ ಸ್ವಾಮೀಜಿಗಳು ನೀತುಳಿಗೆ ಈ ಮೊದಲೇ ಕೊಟ್ಟಿದ್ದ ಜಗತ್ತಿನ ಏಕೈಕ ವಿಶಿಷ್ಟ ಅಪರೂಪದ ರುದ್ರಾಕ್ಷಿಯನ್ನು ತರುವಂತೇಳಿ ಅದನ್ನು ಲಿಂಗದ ಮುಂದಿಟ್ಟು ಪೂಜೆ ಸಲ್ಲಿಸಿದ ಶಿವರಾಮಚಂದ್ರರು ತಮ್ಮ ಜೋಳಿಗೆಯಿಂದ ಪುಟ್ಟ ॐ ಕಾರದ ಚಿನ್ನದ ಡಾಲರ್ ಇರುವ ಸರವನ್ನು ಹೊರತೆಗೆದರು. ಅದಕ್ಕೂ ಪೂಜೆ ನೆರವೇರಿಸಿ ಸರ ಮತ್ತು ರುದ್ರಾಕ್ಷಿಯನ್ನು ನಿಶಾಳ ಕೈಗಿಟ್ಟಾಗ ಎರಡನ್ನು ಪಡೆದ ನಿಶಾ ಅತ್ತಿತ್ತ ತಿರುಗಿಸಿ ನೋಡಿ ಅವುಗಳೊಟ್ಟಿಗೆ ಆಡುತ್ತ ಎರಡನ್ನೂ ಪರಸ್ಪರ ಸ್ಪರ್ಶ ಮಾಡಿಸಿದಳು. ಆ ಕ್ಷಣ ಯಜ್ಞ ಕುಂಡದಲ್ಲಿನ ಜ್ವಾಲೆ ಹಲವು ಸೆಕೆಂಡುಗವರೆಗೆ ಅತ್ಯಂತ ಪ್ರಕಾಶಮಾನದಿಂದ ಪ್ರಜ್ವಲಿಸುವುದಕ್ಕೆ ಪ್ರಾರಂಭಿಸಿ ಜಗತ್ತಿನಲ್ಲಿ ಸಾಮಾನ್ಯ ಮನುಷ್ಯನಿಗೆ ಅರಿವಾಗದಿರುವ ಅಲೌಕಿಕ ಶಕ್ತಿಯೂ ಇದೆ ಎಂಬುದನ್ನು ಸಾರಿ ಹೇಳುತ್ತಿರುವಂತಿತ್ತು. ॐ ಕಾರದ ಡಾಲರ್ ಮತ್ತು ರುದ್ರಾಕ್ಷಿ ಪರಸ್ಪರ ಸ್ಪರ್ಶವಾದೊಡನೇ ಕ್ಷಣಮಾತ್ರದಲ್ಲಿ ಒಂದಾಗಿ ॐ ಕಾರದ ಮೇಲ್ಬಾಗಕ್ಕೆ ಸೇರಿಕೊಂಡ ರುದ್ರಾಕ್ಷಿ ಪುಟ್ಟ ಹರಳಿನಂತೆ ಕಂಗೊಳಿಸುತ್ತಿತ್ತು.
ಶಿವರಾಮಚಂದ್ರ......ಮಗಳೇ ಈ ॐ ಕಾರದ ಡಾಲರನ್ನು ಈ ನಿನ್ನ ಸುಪುತ್ರಿಯ ಪೂರ್ವಜರು ಸಾವಿರಾರು ವರ್ಷಗಳಿಂದ ಪೂಜಿಸುತ್ತ ಬಂದಿದ್ದಾರೆ. ಈ ದಿನ ಜಗತ್ತಿನ ಏಕೈಕ ವಿಶಿಷ್ಟವಾದ ರುದ್ರಾಕ್ಷಿಯೂ ಅದರೊಂದಿಗೆ ಸೇರ್ಪಡೆಯಾಗಿ ಮಗುವಿನ ಮೇಲೆ ಶಿವನ ಅಭಯ ಹಸ್ತದ ಆಶೀರ್ವಾದ ದೊರೆತಂತಾಗಿದೆ ಇದನ್ನು ಮಗಳಿಗೆ ತೊಡಿಸು. ಇದನ್ನು ಮಗುವಿನಿಂದ ಸ್ವತಃ ಅವಳಾಗಲಿ ಅಥವ ಯಾವುದೇ ರೀತಿ ಶಕ್ತಿಯಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ.
ಗುರುಗಳು ಹೇಳಿದಂತೆ ನೀತು ಮಗಳಿಂದ ಸರವನ್ನು ಪಡೆದು ಅವಳ ಕುತ್ತಿಗೆಗೆ ಹಾಕಿದಾಗ ಅದನ್ನೆತ್ತಿ ನೋಡಿಕೊಂಡ ನಿಶಾ ಅಪ್ಪನಿಗದನ್ನು ತೋರಿಸುತ್ತ ಹಿಗ್ಗುತ್ತಿದ್ದಳು. ಬೆಳಿಗ್ಗೆ ಏಳುವರೆ ಹೊತ್ತಿಗೆ ಆರಂಭಿಸಿದ ಯಜ್ಞವು ಮಧ್ಯಾಹ್ನ ಹನ್ನೆರಡುವರೆಗೆ ಸಂಪನ್ನಗೊಳಿಸಿ ರಾಮಚಂದ್ರ ಗುರುಗಳು ತಮ್ಮ ಶಿಷ್ಯರಿಂದ ಎಲ್ಲರಿಗೂ ನೈವೇಧ್ಯಕ್ಕೆಂದು ಇಡಲಾದ ಕೀರು ಮತ್ತು ಸಜ್ಜಿಗೆಯನ್ನು ಪ್ರಸಾದವನ್ನಾಗಿ ಕೊಡಿಸಿದರು. ಎಲ್ಲಾ ಗುರುಗಳಿಗೂ ಅನುಕೂಲವಾಗುವಂತೆ ಅಶೋಕನ ಮನೆಯನ್ನು ಶುಚಿಗೊಳಿಸಿ ಅವರೆಲ್ಲರಿಗೂ ಅಲ್ಲಿಯೇ ಭೋಜನ ಮತ್ತು ವಿಶ್ರಾಂತಿ ತೆಗೆದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.
ಶಿವರಾಮಚಂದ್ರ.....ಸಂಜೆ ಏಳರ ಹೊತ್ತಿಗೆ ಶಿವನ ಸಂಧ್ಯಾರತಿಯು ನಡೆಯಬೇಕಿದೆ ಇಚ್ಚೆಯುಳ್ಳವರು ಅದರಲ್ಲಿ ಪಾಲ್ಗೊಳ್ಳಬಹುದು. ಹರೀಶ ನಾವು ಭೋಜನದ ನಂತರ ವಿಶ್ರಾಂತಿ ಪಡೆದು ಆರತಿಯ ಸಮಯಕ್ಕೆ ಬರುವೆವು........ಎಂದೇಳಿ ಶಿಷ್ಯರೊಂದಿಗೆ ಅಶೋಕನ ಮನೆಯತ್ತ ತೆರಳಿದರು. ಗುರುಗಳು ಮತ್ತವರ ಶಿಷ್ಯರ ಭೋಜನದ ವ್ಯವಸ್ಥೆ ನೋಡಿಕೊಳ್ಳುವ ಜವಾಬ್ದಾರಿ ರವಿ....ರೇವಂತ್...ಪ್ರತಾಪ್ ವಹಿಸಿಕೊಂಡು ಶ್ರದ್ದೆಯಿಂದ ನಿರ್ವಹಿಸಿದರು.
ಮುಖ್ಯೋಪಾಧ್ಯಾಯರು.....ಹರೀಶ ನನ್ನ ಜನ್ಮ ಸಾರ್ಥಕವಾಯಿತು ನಿಜಕ್ಕೂ ನೀನು ಈ ಯಜ್ಞ ಮಾಡಿಸಿದ್ದು ತುಂಬ ಸಂತೋಷ ನನಗೆ ಕೈಲಾಸಕ್ಕೇ ಹೋಗಿ ಬಂದಂತಹ ಅನುಭವವಾಯಿತು.......ಎಂದಾಗ ಸುತ್ತಲಿದ್ದ ಇತರರೂ ಅದಕ್ಕೆ ದನಿಗೂಡಿಸಿದರು.
ಹರೀಶ.....ಸರ್ ಈ ಯಜ್ಞ ಮಾಡಿಸಬೇಕೆಂಬ ಕಲ್ಪನೆಯೂ ನನಗೆ ಇರಲಿಲ್ಲ ಗುರುಗಳು ಹೇಳಿದಂತೆ ಮಾಡಿದೆವಷ್ಟೆ .
ಆಹ್ವಾನಿತರಿಗೆ ಕುಳಿತುಕೊಳ್ಳಲು ಸೂಕ್ತ ವ್ಯಶಸ್ಥೆ ಮಾಡಲಾಗಿದ್ದು ಅಲ್ಲಿಯೇ ಕುಳಿತು ಇಂದಿನ ಯಜ್ಞದ ಬಗ್ಗೆ ಮಾತನಾಡುತ್ತಿದ್ದರೆ ಅವರ ಅತಿಥಿ ಸತ್ಕಾರದ ಜವಾಬ್ದಾರಿಯನ್ನು ಅನುಷ....ಸವಿತಾ....ಸುಮ... ಪ್ರೀತಿಯ ಜೊತೆ ಅಶೋಕ...ವಿಕ್ರಂ ನೋಡಿಕೊಳ್ಳುತ್ತಿದ್ದರು. ಶೀಲಾ ಮತ್ತು ಸುಕನ್ಯಾ ಗರ್ಭಿಯಾಗಿದ್ದ ಕಾರಣ ಅವರಿಗೆ ಕೆಲಸ ಮಾಡುವ ಅವಕಾಶ ನೀಡದೆ ಎಲ್ಲರೊಂದಿಗೆ ಮಾತನಾಡುತ್ತಿರಲು ಹೇಳಿದ್ದರು. ಪೂಜೆಗೆ ಆಗಮಿಸಿದ್ದವರಿಗೆ ಊಟದ ವ್ಯವಸ್ಥೆಯೂ ಅಚ್ಚುಕಟ್ಟಾಗಿ ನೆರವೇರಿದ ಬಳಿಕ ಎಲ್ಲರೂ ಸಂಜೆಯ ಆರತಿಯಲ್ಲೂ ಪಾಲ್ಗೊಂಡು ಮನೆಗೆ ತೆರಳುವುದಾಗಿ ಅಲ್ಲಲ್ಲಿ ಕುಳಿತೇ ವಿಶ್ರಾಂತಿ ಪಡೆಯುತ್ತಿದ್ದರು. ಜಾನಿ ತಡವಾಗಿ ಆಗಮಿಸಿದರೂ ತನ್ನ ಜೊತೆ ಪುಟ್ಟ ಕುಕ್ಕಿ ಮರಿಯನ್ನ ತಂದಿದ್ದನ್ನು ನೋಡಿ ನಿಶಾ ಅವನತ್ತ ಓಡಿ ತನ್ನ ಮುದ್ದಿನ ಕುಕ್ಕಿಯನ್ನು ಮುದ್ದಾಡುತ್ತ ಅಲ್ಲಿದ್ದವರಿಗೆ ಅದನ್ನು ತೋರಿಸುತ್ತ ತನ್ನದೇ ಮಾತಲ್ಲಿ ಏನೇನೋ ಹೇಳುತ್ತ ಸಂತೋಷದಲ್ಲಿದ್ದಳು.
ಪ್ರೀತಿ ಅತ್ತೆಯಿಂದಲೇ ಊಟ ಮಾಡಿಸಿಕೊಂಡ ನಿಶಾಳನ್ನು ಮಲಗಿಸಲು ಶೀಲಾ ತುಂಬ ಸಾಹಸ ಮಾಡಿದಳು. ಸಂಜೆಯವರೆಗೂ ಆಹ್ವಾನಿತರೆಲ್ಲರ ಜೊತೆಗೆ ಕುಳಿತು ಮಾತನಾಡುತ್ತಿದ್ದ ಮನೆಯವರು ಶಿಷ್ಯನೊಬ್ಬ ಆಗಮಿಸಿ ಆರತಿಗೆ ಸಿದ್ದತೆ ಮಾಡಿಕೊಳ್ಳಲು ತಿಳಿಸಿದಾಗ ಮೇಲೆದ್ದರು. ಶಿವನ ಯಜ್ಞಕ್ಕಾಗಿ ಆಗಮಿಸಿದವರೆಲ್ಲರೂ ಸಂಜೆಯ ಆರತಿಯಲ್ಲೂ ಸಹ ಪಾಲ್ಗೊಂಡು ಶಿವಧ್ಯಾನದಲ್ಲಿ ಲೀನರಾದರು. ನೀತು ಹರೀಶ ತಮ್ಮ ಮಗಳೊಟ್ಟಿಗೆ ಆರತಿ ನೆರವೇರಿಸಿ ಎಲ್ಲರನ್ನು ರಾತ್ರಿಯ ಫಲಾಹಾರ ಸೇವಿಸಿಯೇ ತೆರಳಬೇಕೆಂದು ಉಳಿಸಿಕೊಂಡರು. ಅಶೋಕ ಮತ್ತು ಪ್ರತಾಪ್ ಅಡುಗೆಯವರಿಂದ ರಾತ್ರಿಯ ಫಲಾಹಾರದ ವ್ಯವಸ್ಥೆ ಮಾಡಿಸಿದ್ದರು.
ಸವಿತಾಳ ಗಂಡ ಮೊದಲನೇ ಬಾರಿ ಹರೀಶನ ಕುಟುಂಬದ ಜೊತೆ ಬೆರೆತಿದ್ದು ಅವನಿಗೂ ಅತ್ಯಂತ ಸ್ನೇಹಮಯ ವಾತಾವರಣದ ಅನುಭವವಾಗಿತ್ತು. ರಾತ್ರಿ ಫಲಹಾರ ಸೇವಿಸಿದ ನಂತರ ಆಹ್ವಾನಿತರಿಗೆ ಪ್ರಸಾದ....ಸಿಹಿ ತಿಂಡಿಗಳ ಜೊತೆ ತಾಂಬೂಲ ನೀಡಿ ಸತ್ಕರಿಸಿ ಬೀಳ್ಕೊಡಲಾಯಿತು. ಎಲ್ಲರನ್ನು ಕಳುಹಿಸಿದ ಬಳಿಕ ಕೇವಲ ಮನೆಯವರು ಮಾತ್ರ ಉಳಿದಿದ್ದು ಶಿವರಾಮಚಂದ್ರರು ಅವರನ್ನು ತಮ್ಮೆದುರಿಗೆ ಕೂರಿಸಿಕೊಂಡರು.
ಶಿವರಾಮಚಂದ್ರ.....ಮಗಳೆ ನೀತು ನಿನ್ನ ಸುಪುತ್ರಿಯ ಜನ್ಮ...ಆಕೆ ರಕ್ತ ಸಂಬಂಧವು ಯಾವ ಪರಿವಾರದೊಂದಿಗೆ ಇದೆ ಎಂಬುದನ್ನು ನಿನಗೆ ಈಗಾಗಲೇ ದೇವನಾಂದ ತಿಳಿಸಿರಬೇಕಲ್ಲವ.
ನೀತು.....ಹೌದು ಗುರುಗಳೆ ಎಲ್ಲವನ್ನು ತಿಳಿಸಿದ್ದಾರೆ.
ಶಿವರಾಮಚಂದ್ರ......ಎಲ್ಲಾ ವಿಷಯಗಳು ದೇವಾನಂದನಿಗೂ ಸಹ ಗೊತ್ತಿಲ್ಲ ನಮಗೂ ತಿಳಿದಿಲ್ಲ ಅದೇನಿದ್ದರೂ ನಮ್ಮ ಪೂಜನೀಯ ಗುರುಗಳಾದ ಗೋವಿಂದಾಚಾರ್ಯರಿಗೆ ಮಾತ್ರವೇ ತಿಳಿದಿರುವುದು. ಆ ವಿಷಯ ಬಿಡು ಈ ಮಗು ಕರ್ಮಾನುಸಾರವಾಗಿ ಮಗಳಾಗಿಯೇ ನಿನ್ನ ಜೊತೆಯಲ್ಲಿರುತ್ತಾಳೆ ಅದನ್ನು ಯಾರಿಂದಲೂ ಕೂಡ ಎಂದಿಗೂ ಬದಲಾಯಿಸುವುದು ಸಾಧ್ಯವಿಲ್ಲ ಆ ಬಗ್ಗೆ ನಿನಗಿರುವ ಆತಂಕವನ್ನು ತ್ಯಜಿಸಿಬಿಡು. ಆದರೆ ಜನ್ಮಾನುಸಾರ ಮತ್ತು ಇವಳು ಹುಟ್ಟಿರುವಂತ ರಾಜ ಮನೆತನದ ಹಲವು ಕರ್ತವ್ಯಗಳನ್ನು ನಿಭಾಯಿಸಲೇಬೇಕಾದ ಜವಾಬ್ದಾರಿಯೂ ಇವಳ ಮೇಲಿದೆ. ಈ ಮಗುವಿಗೆ ತನ್ನ ತಂದೆ ಹುಟ್ಟಿ ಬೆಳೆದ ಮತ್ತು ತಾನೀ ಭೂಮಿಗೆ ಬಂದ ಅರಮನೆಗೆ ಹೋಗುವುದನ್ನು ನೀನೇ ಸಾರ್ಥಕ ಮಾಡಿಸಬೇಕಲ್ಲವಾ.
ನೀತು.....ಇವಳನ್ನು ನಾನು ದತ್ತು ಪಡೆಯುವ ಮೂಲಕ ಮಗಳಾಗಿ ಸ್ವೀಕರಿಸಿದ್ದರು ರಕ್ತ ಹಂಚಿಕೊಂಡು ಹುಟ್ಟಿದ ಇಬ್ಬರು ಮಕ್ಕಳಿಗಿಂತ ಇವಳೇ ನನಗೆ ಪ್ರಿಯಳಾದವಳು. ಇವಳನ್ನು ಯಾವ ಕಾರಣಕ್ಕೂ ನನ್ನಿಂದ ದೂರ ಮಾಡಲಾರನೇ ಹೊರತು ಇವಳ ಜವಾಬ್ದಾರಿಗಳಿಗೆ ಎಂದೂ ಅಡ್ಡಿಯಾಗಿಯೂ ನಿಲ್ಲುವುದಿಲ್ಲ ಹೇಳಿ ಗುರುಗಳೇ ನಾನೀಗ ಏನು ಮಾಡಬೇಕಿದೆ.
ಶಿವರಾಮಚಂದ್ರ......ಮಗಳೇ ನಿನ್ನ ಮನಸ್ಸು ಎಷ್ಟು ವಿಶಾಲ ಮತ್ತು ಹೃದಯವೆಷ್ಟು ನಿರ್ಮಲವಾಗಿದೆ ಎಂಬುದು ನಮಗೆ ತಿಳಿದಿದೆ. ಇನ್ನು ಮೂರು ದಿನಗಳಲ್ಲಿ ನಿನ್ನ ತಂಗಿಯ ಮದುವೆಯ ಕಾರ್ಯ ಮುಗಿಸಿದ ನಂತರ ಇದೇ ತಿಂಗಳ 25ನೇ ತಾರೀಖಿನಂದು ರಾಜಸ್ಥಾನಲ್ಲಿನ ಉದಯಪುರದಲ್ಲಿರುವ xxxx ಮಹಲ್ ಎಂಬಲ್ಲಿಗೆ ನೀವು ಮಗಳ ಜೊತೆ ತೆರೆಳಬೇಕಿದೆ. ಅರಮನೆಯ ಗೇಟಿನಲ್ಲಿರುವ ಬಹಾದ್ದೂರ್ ಎಂಬ ವ್ಯಕ್ತಿಗೆ ಈ ಲಕೋಟೆಯನ್ನು ನೀಡಿ ನೀವು ಅರಮನೆಯೊಳಗೆ ಪ್ರವೇಶಿಸಬಹುದು. ನಿಮ್ಮನ್ನು ನಾನು ಅಲ್ಲಿಯೇ ಬೇಟಿಯಾಗುವೆ ಸಮಸ್ತರಿಗೂ ತಿಳಿಯಲಿ ಸೂರ್ಯವಂಶಿಗಳ ವಾರಸುದಾರಳು ತನ್ನ ಅರಮನೆಗೆ ಆಗಮಿಸಿದ್ದಾಳೆ ಎಂಬುದು ನಾವಿನ್ನು ಬರುತ್ತೇವೆ.
ನೀತು.....ಅಲ್ಲೇನೂ ತೊಂದರೆ ಇಲ್ಲ ತಾನೇ ಗುರುಗಳೆ ?
ಶಿವರಾಮಚಂದ್ರ......ಹಾಗೇನಾದರು ಇದ್ದಿದ್ದರೆ ನನ್ನ ಗುರುಗಳಾದ ಗೋವಿಂದಾಚಾರ್ಯರು ನನ್ನಿಂದ ನಿಮಗೆ ಈ ಸಂದೇಶವನ್ನು ನೀಡಿ ಕಳಿಸುತ್ತಲೇ ಇರಲಿಲ್ಲ ನಿರ್ಭೀತಿಯಿಂದ ತೆರಳು ಯಾವ ಶಕ್ತಿಗಳೂ ಸಹ ನಿಮಗೆ ಅಪಾಯ ಸಂಭವಿಸಲಾಗದು.
ನೀತು.....ಗುರುಗಳೆ ನನ್ನ ತಂಗಿಯ ಮದುವೆಯವರೆಗೆ ನೀವು ನಮ್ಮ ಆತಿಥ್ಯ ಸ್ವೀಕರಿಸಿ ಅವಳ ಹೊಸ ಜೀವನಕ್ಕೆ ಹಾರೈಸಿದ್ದರೆ.......
ಶಿವರಾಮಚಂದ್ರ ಅರ್ಧಕ್ಕೇ ತಡೆದು......ನಾವು ಜಗತ್ತಿನಲ್ಲಿನ ಎಲ್ಲಾ ಮೋಹ ಮಾಯೆಗಳಿಂದ ದೂರವಾಗಿರುವ ಸನ್ಯಾಸಿಗಳಾಗಿರುವ ಕಾರಣಕ್ಕೆ ವಿವಾಹ ಮಹೋತ್ಸವಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಆದರೆ ಹೊರಡುವ ಮುನ್ನ ನಿನ್ನ ತಂಗಿಯ ನವ ಜೀವನಕ್ಕೆ ಅವಳಿಗೆ ಶುಭವಾಗಲೆಂದು ಭಾವಿ ಸತಿಪತಿಗಳಿಗೆ ಆಶೀರ್ವಧಿಸುತ್ತೇವೆ. ಆದರೆ ನನ್ನ ಶಿಷ್ಯ ದೇವಾನಂದನಿಂದ ಇನ್ನೊಂದು ಕಾರ್ಯ ಸಂಪನ್ನವಾಗ ಬೇಕಾಗಿದೆ ನಾಳೆ ಅದನ್ನು ಪೂರ್ಣಗೊಳಿಸಿ ನಮ್ಮಲ್ಲಿಗೆ ಬರುತ್ತಾನೆ. ನಾಳೆ ಅವನೇ ಬಂದು ನಿಮ್ಮೆಲ್ಲರನ್ನು ಬೇಟಿಯಾಗಲಿದ್ದಾನೆ ನಾವಿನ್ನು ಬರುತ್ತೇವೆ.
ಎಲ್ಲರಿಗೂ ಆಶೀರ್ವಧಿಸಿ ತಮ್ಮ ಶಿಷ್ಯರೊಟ್ಟಿಗೆ ತೆರಳುವ ಮುನ್ನ ನಿಶಾಳ ತಲೆ ನೇವರಿಸಿ......ನಿನ್ನ ಜನ್ಮ ಭೂಮಿ ನಿನ್ನ ಬರುವಿಕೆಗಾಗಿ ಕಾತುರದಿಂದ ಕಾಯುತ್ತಿದೆ ಮಗಳೆ ಅಪ್ಪ ಅಮ್ಮನ ಜೊತೆ ಅಲ್ಲಿಗೆ ಬಾ ........ಎಂದೇಳಿ ಅಲ್ಲಿಂದ ತೆರಳಿದರು.
ಮಾರನೇ ದಿನ ದೇವಾನಂದ ಸ್ವಾಮೀಜಿಗಳು ಮನೆಗೆ ಆಗಮಿಸಿದ್ದು ಹರೀಶ....ನೀತು....ಅಶೋಕ...ರಜನಿ...ವಿಕ್ರಂ....ಸುಮ....ಗಿರೀಶ ....ರಶ್ಮಿ ಮತ್ತು ದೃಷ್ಟಿಯನ್ನು ಎದುರಿನ ಮನೆಯಲ್ಲಿ ಬೇಟಿಯಾಗಿ ಭವಿಷ್ಯದಲ್ಲಿ ನಡೆಯಲಿರುವ ಮದುವೆಯ ಬಗ್ಗೆ ಚರ್ಚೆ ನಡೆಸಿದರು. ರಶ್ಮಿಯನ್ನು ಒಂಟಿಯಾಗಿ ಬೇಟಿಯಾದ ಗುರುಗಳು ಅವಳ ಪೂರ್ವ ಜನ್ಮದ ದುಶ್ಕೃತ್ಯಗಳಿಗೆ ಬಲಿಯಾದಲ್ಲಿ ದೃಷ್ಟಿ ಮೊದಲನೆಯವಳು. ಆ ಜನ್ಮದಲ್ಲಿ ಆಕೆಯ ಮೇಲೆ ರಶ್ಮಿ ಎಸಗಿದ ಅಮಾನುಷ ಹಿಂಸೆಗಳ ಬಗ್ಗೆ ಅವಳಿಗೆ ತಿಳಿಸಿದಾಗ ರಶ್ಮಿ ಕಣ್ಣೀರಿಡುತ್ತ ಗುರುಗಳಲ್ಲಿ ಕ್ಷಮೆ ಕೋರಿದಳು. ಅದಕ್ಕೆ ಪರಿಹಾರವಾಗಿ ತಾನು ಗಿರೀಶನ ಪ್ರೀತಿಯನ್ನು ದೃಷ್ಟಿಯೊಂದಿಗೆ ಹಂಚಿಕೊಳ್ಳಲು ಪರಿಪೂರ್ಣ ಮನಸ್ಸಿನಿಂದ ಸಿದ್ದ ಎಂಬುದನ್ನೂ ತಿಳಿಸಿದಳು.
ಗುರುಗಳು ಎಲ್ಲರನ್ನು ಒಳಗೆ ಕರೆದು ರಶ್ಮಿ ತೆಗೆದುಕೊಂಡ ನಿರ್ಧಾರವನ್ನು ತಿಳಿಸಿ ರಶ್ಮಿ ಮತ್ತು ದೃಷ್ಟಿ ಇಬ್ಬರೂ ಗಿರೀಶನ ಮಡದಿಯರಾಗುವ ಹಾದಿಯನ್ನು ಸುಗಮಗೊಳಿಸಿದರು. ಈ ವಿಷಯ ತಿಳಿದು ದೃಷ್ಟಿ ಅತೀವ ಸಂತಸಪಟ್ಟರೆ ಗಿರೀಶ ಇದಕ್ಕೇನು ಹೇಳಬೇಕೆಂದೇ ತಿಳಿಯದೆ ತಬ್ಬಿಬ್ಬಾಗಿದ್ದರೆ ಅಶೋಕ ರಜನಿ ದಂಪತಿ ದೃಷ್ಟಿಯನ್ನು ಹಾಗು ವಿಕ್ರಂ ಸುಮ ದಂಪತಿ ರಶ್ಮಿಯನ್ನು ಇಂದಿನಿಂದ ಇವಳೂ ತಮ್ಮ ಮಗಳೆಂದು ಸಂತೋಷದಿಂದ ಹಾರೈಸಿದರು. ನೀತು ಮಗನಿಗೆ ಈಗೆನೂ ತಲೆ ಕೆಡಿಸಿಕೊಳ್ಳದಿರು ಮದುವೆಗಿನ್ನೂ ಬಹಳ ವರ್ಷಗಳಿವೆ ಓದಿನ ಕಡೆಗಷ್ಟೇ ಗಮನ ಹರಿಸುವಂತೆ ಹೇಳಿದಳು.
ಸ್ವಾಮೀಜಿಗಳು ನೀತು ಹರೀಶನನ್ನು ಬಿಟ್ಟು ಎಲ್ಲರನ್ನು ಹೋಗುವಂತೆ ಸೂಚಿಸಿ.......ನೀತು ಹರೀಶ ನಿನ್ನ ಕಿರಿಯಣ್ಣ ಅತ್ತಿಗೆಯ ಮನಸ್ಸಲ್ಲೂ ತಮ್ಮ ಮಗಳು ನಯನಾಳನ್ನು ನಿಮ್ಮ ಕಿರಿ ಮಗ ಸುರೇಶನಿಗೆ ಕೊಟ್ಟು ಮದುವೆ ಮಾಡುವ ಆಸೆಯಿದೆ. ಈಗಲೇ ಈ ವಿಷಯದ ಬಗ್ಗೆ ನೀವು ಚರ್ಚಿಸುವ ಅಗತ್ಯವಿಲ್ಲ ನಾನೇ ಸರಿಯಾದ ಸಮಯದಲ್ಲಿ ಅದನ್ನು ಎಲ್ಲರೆದುರಿಗೆ ಪ್ರಸ್ತಾಪಿಸುವೆ ನಿಮಗೆ ತಿಳಿದಿರಲೆಂದು ಹೇಳಿದೆನಷ್ಟೆ . ಈಗ ನಾನೂ ಗುರುಗಳ ಹತ್ತಿರ ತೆರಳುತ್ತಿರುವೆ ಈ ತಿಂಗಳ 25 ನೇ ತಾರೀಖಿನಂದು ಗುರುಗಳೊಟ್ಟಿಗೆ ನೀವು ಮಗಳನ್ನು ಕರೆದುಕೊಂಡು ಉದಯಪುರಕ್ಕೆ ಬಂದಾಗ ಬೇಟಿಯಾಗುವೆ. ನೀವು ಹೋಗಿ ತಂಗಿ ಅನುಷಾಳ ಮದುವೆ ಕಾರ್ಯವನ್ನು ನೆರವೇರಿಸಲು ಏರ್ಪಾಡು ಮಾಡಿಕೊಳ್ಳಿರಿ ಎಲ್ಲವೂ ಶುಭವಾಗಲಿದೆ.
ಮನೆಯ ಹೊರಗೇ ಸುರೇಶ ಮತ್ತು ನಯನಾಳ ಜೊತೆ ಆಡುತ್ತಿದ್ದ ನಿಶಾ ಅಮ್ಮ ಬರುತ್ತಿರುವುದನ್ನು ಕಂಡ ಅವಳತ್ತ ಓಡಿದಳು. ಅಂದಿನಿಂದಲೇ ಅನುಷ ಪ್ರತಾಪರ ಮದುವೆಯ ಶುಭಕಾರ್ಯವು ಪ್ರಾರಂಭವಾಗಿ ಮೊದಲಿಗೆ ಮಹಿಳಾ ಮಣಿಯರೆಲ್ಲ ತಮ್ಮ ಕೈಗಳಿಗೆ ಮೆಹಂದಿ ಹಾಕಿಸಿಕೊಳ್ಳುತ್ತಿದ್ದರು. ನಿಶಾ ಅದನ್ನು ನೋಡಿ ಮೆಹಂದಿ ಹಾಕುತ್ತಿದ್ದವಳ ಮುಂದೆ ತಾನೂ ಕೈ ಚಾಚಿ ಹಾಕಿಸಿಕೊಂಡಳು. ನೀತು ಕೈನಲ್ಲೂ ಮೆಹಂದಿ ಹಾಕಲಾಗಿದ್ದು ಮಗಳು ಆಡುತ್ತ ತನ್ನ ಕೈಗಳನ್ನು ಪರಸ್ಪರ ಕೂಡಿಸಿ ಮೆಹಂದಿ ಹಾಳು ಮಾಡಿಕೊಳ್ಳದಂತೆ ಅವಳನ್ನು ನೋಡಿಕೊಳ್ಳುವ ಜವಾಬ್ದಾರಿ ಗಂಡನ ಹೆಗಲಿಗೇರಿಸಿದಳು.
ನಿಶಾ ಆಡುತ್ತ ಮೆಹಂದಿ ಹಾಳು ಮಾಡಿಕೊಳ್ಳದಂತೆ ಕಾಪಾಡಲು ಅವಳನ್ನು ತನ್ನೊಡನೆ ಕೂರಿಸಿಕೊಂಡು ಕಾಯುತ್ತ ತಡೆಯುವಲ್ಲಿ ಹರೀಶನಿಗೆ ಸಾಕುಸಾಕಾಗಿ ಹೋಗಿತ್ತು. ನೀತು ಗಂಡನ ಪರಿಸ್ಥಿತಿಯನ್ನು ನೋಡಿ ದೂರದಿಂದಲೇ ಮುಗುಳ್ನಗುತ್ತಿದ್ದರೆ ಮಗಳನ್ನು ಸಂಭಾಳಿಸುವಷ್ಟಕ್ಕೇ ಹರೀಶ ಇಂಗು ತಿಂದ ಮಂಗನಂತಾಗಿ ಹೋಗಿದ್ದನು. ಸಂಜೆ ನೀತು ಮಗಳ ಕೈ ತೊಳೆಸಿದಾಗ ಅವಳ ಕೈಯಲ್ಲಿನ ಮೆಹಂದಿ ಬೇರೆಲ್ಲರ ಕೈಗಳಿಗಿಂತ ಜಾಸ್ತಿ ರಂಗೇರಿದ್ದು ಅದನ್ನು ಎಲ್ಲರ ಮುಂದೆಯೂ ಚಾಚಿ ತೋರಿಸುತ್ತ ನಿಶಾ ಖುಷಿ ಪಡುತ್ತಿದ್ದಳು.
* *
* *
ಮಾರನೇ ದಿನ ತಂದೆ ತಾಯಿ ಸ್ಥಾನದಲ್ಲಿ ರೇವತಿ—ರಾಜೀವ್ ಇದ್ದು ತಮ್ಮ ದತ್ತು ಕಿರಿಯ ಮಗಳಾದ ಅನುಷಾಳ ವಿವಾಹ ಪೂರ್ವದಲ್ಲಿನ ವಿಧಿ ವಿಧಾನಗಳನ್ನು ಪೂರೈಸುತ್ತಿದ್ದರು. ಇಬ್ಬರು ಅಣ್ಣಂದಿರು ತಮ್ಮ ತಂಗಿ ನೀತುಳ ವಿವಾಹ ಸಮಯದಲ್ಲಿ ಪರಿಚಯವೇ ಇರದಿರುವ ಕಾರಣ ಆಗ ಏನೇನು ಮಾಡಲಾಗಲಿಲ್ಲವೋ ಅದನ್ನೆಲ್ಲ ಕಿರಿಯ ತಂಗಿ ಅನುಷಾಳ ಮದುವೆಯಲ್ಲಿ ನೆರವೇರಿಸುತ್ತಿದ್ದರು.
ಕಲ್ಯಾಣ ಮಂಟಪಕ್ಕೆ ಆಗಮಿಸಿದಾಗ ವಿವಾಹ ಮಹೋತ್ಸವದ ಎಲ್ಲ ಜವಾಬ್ದಾರಿ ವಹಿಸಿಕೊಂಡಿದ್ದ ದೀಪ ವಿವೇಕ್ ದಂಪತಿ ಪ್ರತಿಯೊಂದು ಕೆಲಸವನ್ನು ತುಂಬ ಅಚ್ಚುಕಟ್ಟಾಗಿ ಅರೇಂಜ್ ಮಾಡಿದ್ದರು. ಪ್ರತಾಪ್ ತನ್ನ ಹಿರಿಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಹರೀಶ—ನೀತು ಇಬ್ಬರನ್ನೂ ಅಣ್ಣ ಅತ್ತಿಗೆ ಎಂದೇ ಪರಿಚಯ ಮಾಡಿಕೊಟ್ಟನು. ಅದೇ ರೀತಿ ಅಶೋಕ—ರಜನಿ ಮತ್ತು ರವಿ—ಶೀಲಾ ದಂಪತಿಗಳನ್ನು ಕೂಡ ಪರಿಚಯಿಸಿದನು. ಈ ಮೊದಲೇ ನಿರ್ಧರಿಸಿದ್ದಂತೆ ಅನುಷಾಳನ್ನು ರೇವತಿ—ರಾಜೀವ್ ದಂಪತಿ ಧಾರೆಯೆರೆದರೆ ಅಶೋಕ—ರಜನಿಯು ಅನುಷಾಳನ್ನು ಸ್ವೀಕರಿಸಿದರು. ನೀತು ಮದುವೆ ಕೆಲಸದಲ್ಲಿ ಫುಲ್ ಬಿಝಿಯಾಗಿದ್ದ ಕಾರಣ ರಶ್ಮಿ....ದೃಷ್ಟಿ....ನಯನ....ನಿಕಿತಾ ಮತ್ತು ನಮಿತಾಳಿಗೆ ಮಗಳ ಜವಾಬ್ದಾರಿ ಹೊರಿಸಿದ್ದಳು.
ಗಿರೀಶ—ಸುರೇಶ ಅಪ್ಪ ಅಮ್ಮ ಇತರರು ಹೇಳಿದ ಕೆಲಸಗಳನ್ನು ಮಾಡುತ್ತಿದ್ದು ವಿಕ್ರಂ ಪತ್ನಿಯೊಡನೆ ಬರುವ ಅತಿಥಿಗಳನ್ನು ಬರಮಾಡಿಕೊಳ್ಳುತ್ತಿದ್ದರೆ ರೇವಂತ್—ಪ್ರೀತಿ ಎಲ್ಲರ ಆತಿಥ್ಯದ ಜವಾಬ್ದಾರಿಯನ್ನು ಜೊತೆಗೂಡಿ ನೋಡಿಕೊಳ್ಳುತ್ತಿದ್ದರು. ಎಲ್ಲದರ ಉಸ್ತುವಾರಿ ರವಿಯು ಖುದ್ದಾಗಿ ನೋಡಿಕೊಳ್ಳುತ್ತಿದ್ದು ಬಸುರಿಯದ ಶೀಲಾಳಿಗೆ ವಧು ಕೋಣೆಯಲ್ಲಿನ ಕೆಲಸ ನೋಡಿಕೊಳ್ಳಲು ಬಿಟ್ಟಿದ್ದರು. ಸುಕನ್ಯಾ—ಸವಿತಾ ಇಬ್ಬರೂ ನೀತುಳಿಗೆ ಸಹಾಯ ಮಾಡುತ್ತಿದ್ದರೆ ಅವರಿಬ್ಬರ ಗಂಡಂದಿರು ಹರೀಶ ಮಾಡುವ ಕೆಲಸಗಳಿಗೆ ಸಾಥ್ ಕೊಡುತ್ತಿದ್ದರು. ಅನುಷ ಪ್ರತಾಪನ ಮದುವೆ ಸಡಗರ ಸಂಭ್ರಮದಿಂದ ಎಲ್ಲರ ಆಶೀರ್ವಾದದೊಂದಿಗೆ ವಿಘ್ನವಿಲ್ಲದೆ ಸಂಪನ್ನವಾಯಿತು.
ಮದುವೆಗೂ ಮೊದಲೇ ನೀತು...ಶೀಲಾ...ರಜನಿ ಮೂವರು ಸೇರಿ ನಿರ್ಧರಿಸಿದ್ದಂತೆ ಅಶೋಕನ ಮನೆಯ ಮಹಡಿಯಲ್ಲೇ ನವವಿವಾಹ ದಂಪತಿಗಳ ವಾಸ್ತವ್ಯಕ್ಕೆ ಸಿದ್ದಪಡಿಸಲಾಗಿದ್ದು ಅಲ್ಲಿಯೇ ಅನುಷಾಳ ಮನೆ ತುಂಬಿಸಿಕೊಳ್ಳುವ ಶಾಸ್ತ್ರವನ್ನು ಅಶೋಕ—ರಜನಿ ದಂಪತಿ ನೆರವೇರಿಸಿದರು. ನೀತುಳ ಅಣ್ಣಂದಿರು ಕೆಲಸದ ನಿಮಿತ್ತ ಮಾರನೇ ದಿನ ಸಿಂಗಾಪುರಕ್ಕೆ ಮರಳುವವರಿದ್ದು ತಮ್ಮ ಜೊತೆಯಲ್ಲಿಯೇ ನವ ದಂಪತಿಗಳನ್ನು ಹನಿಮೂನಿಗೆಂದು ಕರೆದೊಯ್ಯಲಿದ್ದರು.
ನೀತು.....ವಿಕ್ಕಿ ಅಣ್ಣ ಗುರುಗಳು ನಿಮ್ಮ ಕಷ್ಟದ ಬಗ್ಗೆ ಮದುವೆಯಾದ ನಂತರ ನನಗೆ ತಿಳಿಸಲು ಹೇಳಿದ್ದರಲ್ಲ ಈಗ ಹೇಳಿ.
ವಿಕ್ರಂ......ನೀತು ಮಕ್ಕಳಿಬ್ಬರೂ ರಜೆ ಮುಗಿಯುವ ತನಕ ಇಲ್ಲಿಯೇ ಇರುತ್ತಾರಲ್ಲ ಅವರನ್ನು ಕರೆದೊಯ್ಯಲು ಬಂದಾಗ ನಮ್ಮ ಪ್ರೀತಿಯ ತಂಗಿಗೆ ಏನನ್ನೂ ಮುಚ್ಚಿಡದೆ ತಿಳಿಸುತ್ತೇನೆ.
ನೀತು ಬಲವಂತ ಮಾಡಿದಾಗ ಹರೀಶ ಹೆಂಡತಿಯನ್ನು ತಡೆದು...... ಅವರೇನು ನಿನಗೆ ಹೇಳುವುದಿಲ್ಲ ಅನ್ನುತ್ತಿಲ್ಲವಲ್ಲ ಮಕ್ಕಳು ಇಲ್ಲಿಯೇ ಇರುತ್ತಾರಲ್ಲ ಇವರೇನೂ ಹೇಳದಿದ್ದರೆ ಕಳುಹಿಸುವುದೇ ಬೇಡ.
ಗಂಡನ ಮಾತಿಗೆ ನೀತು ಸಮ್ಮತಿಸಿ ಮಾರನೇ ದಿನ ಅಣ್ಣ ಅತ್ತಿಗೆಯರ ಜೊತೆ ಹೊಸ ಜೀವನದ ಶುಭಾರಂಭ ಮಾಡಲು ತೆರಳುತ್ತಿದ್ದ ತಂಗಿ ಅನುಷಾಳನ್ನು ಪ್ರೀತಿಯಿಂದ ಬೀಳ್ಕೊಟ್ಟಳು. ಪ್ರತಾಪ್ ಮೂವರು ಅಣ್ಣಂದಿರ ಆಶೀರ್ವಾದ ಪಡೆದು ಅತ್ತೆ ಮಾವನ ಕಾಲಿಗೆ ಪತ್ನಿಯ ಸಮೇತ ನಮಸ್ಕರಿಸಿದನು. ಎಲ್ಲರೂ ನವ ದಂಪತಿಗಳಿಗೆ ಚೆನ್ನಾಗಿ ಏಂಜಾಯ್ ಮಾಡಿಕೊಂಡು ಬರುವಂತೆ ಹಾರೈಸಿ ಬೀಳ್ಕೊಟ್ಟರು.
ರೇವತಿ—ರಾಜೀವ್ ದಂಪತಿಗಳೂ ದಕ್ಷಿಣ ಭಾರತದ ತೀರ್ಥಯಾತ್ರೆಗೆ ಹೋಗುವುದೆಂದು ನಿರ್ಧರಿಸಿಕೊಂಡೇ ಬಂದಿದ್ದರು. ಅಪ್ಪ ಎಷ್ಟೇ ಬೇಡವೆಂದರು ಕೇಳದೆ ಬಸ್ಯನಿಗೆ ಫೋನ್ ಮಾಡಿದ ನೀತು ಮನೆಗೆ ಬರುವಾಗ ತನ್ನೊಡನೆ ಅವನ ಸಹಪಾಠಿಗಳಲ್ಲಿ ಚೆನ್ನಾಗಿ ಡ್ರೈವಿಂಗ್ ತಿಳಿದವನನ್ನು ಕರೆತರಲು ಹೇಳಿದಳು. ಬಸ್ಯ ತನ್ನೊಡನೆ ರವಿ ಎಂಬ ಯುವಕನನ್ನು ಕರೆತಂದಿದ್ದು ನೀತು ಆತನ ವಯಕ್ತಿಕ ಖರ್ಚಿಗೆಂದು ಇಪ್ಪತ್ತು ಸಾವಿರ ನೀಡಿ ಅಪ್ಪ ಅಮ್ಮನನ್ನು ಇನೋವಾದಲ್ಲಿ ಅವರು ಇಚ್ಚಿಸುವ ಊರುಗಳಿಗೆ ಕರೆದೊಯ್ಯಲು ತಿಳಿಸಿದಳು. ಇನೋವಾ ಪೆಟ್ರೋಲಿಗೆಂದು ಇಪ್ಪತ್ತು ಸಾವಿರ ಕೊಟ್ಟ ನೀತು ಯಾವುದೇ ರೀತಿ ಅನಾನುಕೂಲವಾಗದೆ ಜೋಪಾನವಾಗಿ ಕರೆದೊಯ್ಯುವಂತೆ ರವಿಗೆ ಎಚ್ಚರಿಸಿದಳು. ಮಾರನೇ ದಿನ ಬೆಳಿಗ್ಗೆ ಎಲ್ಲಾ ಮೊಮ್ಮಕ್ಕಳನ್ನೂ ಮುದ್ದಿಸಿ ರೇವತಿ—ರಾಜೀವ್ ತೀರ್ಥಯಾತ್ರೆಗೆ ತೆರಳಿದರು.
ರವಿ ನೌಕರಿಗೆ ಕೊಟ್ಟಿದ್ದ ರಾಜೀನಾಮೆ ಅಂಗೀಕಾರವಾಗಿದ್ದು ಇನ್ನು ಇಲ್ಲೇ ಉಳಿದುಕೊಂಡು ಫ್ಯಾಕ್ಟರಿ ಮತ್ತು ಫುಡ್ ಯೂನಿಟ್ಟಿನ ಕಡೇ ಹಂತದ ಕಾಮಗಾರಿ ನೋಡಿಕೊಳ್ಳಲಿದ್ದನು. ಅಶೋಕನೂ ತನ್ನೂರು ಮತ್ತು ಇಲ್ಲಿನ ಕೆಲಸ ಎರಡೂ ಕಡೆ ನೋಡಿಕೊಂಡು ಓಡಾಡುವ ಬಗ್ಗೆ ತೀರ್ಮಾನಿಸಿದ್ದರೆ ರಜನಿ ಹೊಸ ಮನೆಗೆ ಶಿಫ್ಟಾಗಲಿದ್ದರು. ಶೀಲಾಳ ಜೊತೆ ರಜನಿಯೂ ಮನೆಯಲ್ಲಿರಲು ನಿರ್ಧರಿಸಿ ನೀತು ಹರೀಶರೇ ಮಕ್ಕಳೊಟ್ಟಿಗೆ ರಾಜಸ್ಥಾನಕ್ಕೆ ತೆರಳುವುದಾಗಿ ತೀರ್ಮಾನವಾಯಿತು.
ಶಾಲೆಯಲ್ಲಿ ಹತ್ತನೇ ತರಗತಿಗಳ ಪಬ್ಲಿಕ್ ಪರೀಕ್ಷೆಗಳಿದ್ದರೂ ಕೂಡ ಪ್ರಾಂಶುಪಾಲರೇ ಮುತುವರ್ಜಿ ವಹಿಸಿ ಹರೀಶನಿಗೆ ಆರೋಗ್ಯವು ಸರಿಯಿಲ್ಲದ ಕಾರಣ ನಮೂಧಿಸಿ ರಜೆ ಮಂಜೂರು ಮಾಡಿಬಿಟ್ಟರು.
ನೀತು ಹರೀಶನ ಜೊತೆ ಅವರ ಮೂವರು ಮಕ್ಕಳು ಹಾಗು ಭಾವೀ ಮೂವರು ಸೊಸೆಯಂದಿರೇ ತೆರಳಲಿದ್ದರು. ನಿಕಿತಾಳ ದ್ವಿತೀಯ ಪಿಯು ಪರೀಕ್ಷೆಗಳು ಬಾಕಿ ಇರುವುದರಿಂದ ಅಕ್ಕನೊಬ್ಬಳನ್ನೇ ಬಿಟ್ಟು ಬರಲು ಮನಸ್ಸಾಗುವುದಿಲ್ಲ ಎಂದ ನಮಿತ ನೀತು ಆಂಟಿಯ ಕ್ಷಮೆ ಕೇಳಿದಳು. ಮಾರ್ಚ್ 24ರ ಮುಂಜಾನೆ ಎಲ್ಲರಿಂದ ಬೀಳ್ಗೊಂಡು ಹೊರಟಾಗ ಬಸ್ಯನೇ ಎಲ್ಲರನ್ನು ಏರ್ಪೋಟಿಗೆ ಡ್ರಾಪ್ ಮಾಡಲು ಬಂದಿದ್ದನು. ನಿಶಾ ತನ್ನ ಅಣ್ಣಂದಿರು ಹಾಗು ಅಕ್ಕಂದಿರ ಜೊತೆಯಲ್ಲಿ ಫುಲ್ ಕೀಟಲೆ ಮಾಡುತ್ತ ಅಮ್ಮನೊಂದಿಗೆ ಆಡುತ್ತಲೇ ತನಗೇ ತಿಳಿಯದ ತನ್ನ ಹುಟ್ಟೂರಿನತ್ತ ಹೊರಟಿದ್ದಳು.
ಹುಟ್ಟೂರಿನತ್ತ ನಿಶಾಳ ಪ್ರಯಾಣ........
ಸಂಜೆ ಹೊತ್ತಿಗೆ ಎಲ್ಲರೂ ಉದಯಪುರಕ್ಕೆ ತಲುಪಿ ಬರುವ ಮುಂಚೆ ಕಾದಿರಿಸಿದ್ದ ಫೈವ್ ಸ್ಟಾರ್ ಹೋಟೆಲ್ಲಿಗೆ ಹೊರಟರು. ಮೂರು ರೂಂ ತೆಗೆದುಕೊಂಡಿದ್ದು ಗಿರೀಶ—ಸುರೇಶ ಒಂದರಲ್ಲಿ....ಮೂರೂ ಜನ ಹುಡುಗಿಯರಿಗೊಂದು ಕೊನೆಯಲ್ಲಿ ಅವೆರಡೂ ರೂಂ ಎದುರಿಗೇ ನೀತು ಹರೀಶ ಮಗಳೊಟ್ಟಿಗೆ ಉಳಿದುಕೊಂಡರು. ನಿಶಾ ಹುಟ್ಟೂರು ತಲುಪುವ ತನಕ ವಿಮಾನದಲ್ಲಿಯೂ ಕೀಟಲೆ ಮಾಡುತ್ತಿದ್ದು ಇಲ್ಲಿಗೆ ಬಂದಾಗಿನಿಂದ ಸಪ್ಪಗಾಗಿ ಹೋಗಿ ಅಮ್ಮನನ್ನು ಬಿಟ್ಟು ಯಾರೊಬ್ಬರ ಹತ್ತಿರವೂ ಹೋಗುತ್ತಿರಲಿಲ್ಲ. ಇದೂ ಕೂಡ ಬಹುಶಃ ದೇವರ ಆಟ ಆಗಿರಬಹುದೇನೋ ಹೆತ್ತ ತಂದೆ ತಾಯಿಯರ ಅಗಲಿಕೆಯ ಕಾಣದ ನೋವು ಮಗುವನ್ನು ಕಾಡುತ್ತಿದ್ದಿರಬಹುದು. ನೀತು ಮಗಳಿಗೆ ಬೇಗ ಊಟ ಮಾಡಿಸಿ ಮಲಗಿಸಿದ ನಂತರ ಎಲ್ಲಾ ಮಕ್ಕಳಿಗೂ ಊಟ ಮಾಡಿಕೊಂಡು ರೂಂ ಲಾಕ್ ಮಾಡಿ ಮಲಗುವ ತನಕ ಹರೀಶನಿಗೆ ನಿಗಾ ವಹಿಸಿರಲು ತಿಳಿಸಿ ಮಗಳ ಜೊತೆ ಮಲಗಿದಳು.
ಮಾರನೇ ದಿನ ಹೋಟೆಲ್ಲಿನಲ್ಲೇ ಬಾಡಿಗೆಗೆ ಪಡೆದ ಕಾರಿನಲ್ಲಿ ಎಲ್ಲರು xxxx ಮಹಲಿನತ್ತ ಹೊರಟರೆ ಅಮ್ಮನ ಮಡಿಲಲ್ಲಿದ್ದ ನಿಶಾ ಏನೋ ಅವ್ಯಕ್ತ ಭಯದಲ್ಲಿ ಅಮ್ಮನನ್ನು ಬಿಗಿಯಾಗಿ ತಬ್ಬಿಕೊಂಡಿದ್ದಳು. ಮಹಲ್ ತಲುಪಿ ಗೇಟಿನ ಬಳಿ ಬಹದ್ದೂರ್ ಬಗ್ಗೆ ವಿಚಾರಿಸಿದ ಹರೀಶ ಜೇಬಿನಿಂದ ಶಿವರಾಮಚಂದ್ರರು ಕೊಟ್ಟಿರುವ ಲಕೋಟೆ ತೆಗೆದು ಅವನಿಗೆ ಕೊಡುವ ಮುನ್ನವೇ ಬಹದ್ದೂರ್ ಸಿಂಗ್ ದೃಷ್ಟಿ ನಿಶಾಳ ಮೇಲೆ ಬಿದ್ದಿತ್ತು. ನಿಶಾಳನ್ನು ನೋಡಿದಾಕ್ಷಣವೇ ಮೊಣಕಾಲೂರಿದ ಬಹದ್ದೂರ್ ಸಿಂಗ್ ಆಕೆಗೆ ನಮಸ್ಕರಿಸುತ್ತ.....ಯುವರಾಣಿಗೆ ತಮ್ಮ ಅರಮನೆಯಲ್ಲಿ ಸ್ವಾಗತ ಸುಸ್ವಾಗತ " ಎಂದಾಗ ಅರಮನೆ ಗೇಟಿನ ಬಳಿ ಪಹರೆಯಲ್ಲಿದ್ದ ನಲವತ್ತಕ್ಕೂ ಹೆಚ್ಚು ಜನರು ತಮ್ಮ ಕೈಯಲ್ಲಿದ್ದ ಬಂದೂಕುಗಳನ್ನು ಕೆಳಗಿಟ್ಟು ನಿಶಾಳೆದುರಿಗೆ ಸಾಸ್ಟಾಂಗ ನಮಸ್ಕಾರ ಮಾಡಿಬಿಟ್ಟರು.
ನಿಶಾ ಇದನ್ನೆಲ್ಲಾ ನೋಡಿ ಗಾಬರಿಗೊಂಡು ಅಮ್ಮನ ಕಡೆ ನೋಡಿದಾಗ ನೀತು.....ಬಹದ್ದೂರ್ ಸಿಂಗ್ ನಿಮ್ಮ ಯುವರಾಣಿ ನಿಮ್ಮ ವಂದನೆಗಳನ್ನು ಸ್ವೀಕರಿಸಿದ್ದಾಳೆ ಎದ್ದೇಳಿ ಅವಳಿಗೆ ಇದನ್ನೆಲ್ಲಾ ನೋಡಿ ಭಯವಾಗುತ್ತಿದೆ. ಬಹದ್ದೂರ್ ಸಿಂಗ್.....ನೀವು ಯಾರೆಂದು ನಮಗೆ ಗೊತ್ತಿಲ್ಲ ಕ್ಷಮಿಸಿ ಆದರೆ ಯುವರಾಣಿ ನಿಮ್ಮೊಡನೆ ಇರುವುದನ್ನು ನೋಡಿದರೆ ಆಕೆಗೆ ನೀವು ಅತ್ಯಾಪ್ತರೆಂದು ತಿಳಿಯುತ್ತಿದೆ. ಯುವರಾಣಿ ಯಾವುದಕ್ಕೂ ಹೆದರಬೇಕಿಲ್ಲ ನಾವು ಪ್ರಾಣವನ್ನಾದರೂ ನೀಡಿ ಅವರ ಎದುರಿಗೆ ನಿಲ್ಲುವ ಅಪಾಯವನ್ನು ತಡೆಯುತ್ತೇವೆ. ದಯವಿಟ್ಟು ಮತ್ತೊಂದು ಬಾರಿ ಕ್ಷಮಿಸಬೇಕು ನಿಮ್ಮನ್ನೆಲ್ಲಾ ಹೀಗೆ ಗೇಟ್ ಬಳಿಯೇ ನಿಲ್ಲಿಸಿ ನಾನು ಅವಮಾನ ಮಾಡುತ್ತಿರುವೆ ಕ್ಷಮಿಸಿ ಬನ್ನಿ ಮತ್ತೊಮ್ಮೆ xxxx ಅರಮನೆಗೆ ಸ್ವಾಗತ ಬಯಸುತ್ತೇನೆ.
ಗೇಟಿನೊಳಗೆ ಕಾಲಿಟ್ಟಾಗಲೇ ಆರು ಅಶ್ವಗಳಿದ್ದ ಸಾರೋಟನ್ನು ತಂದು ನಿಲ್ಲಿಸಿದ್ದ ಸೇವಕನೊಬ್ಬ ಅದರಲ್ಲಿ ನೀತು ಮಗಳೊಂದಿಗೆ ಕುಳಿತುಕೊಳ್ಳುವ ತನಕ ಎಲ್ಲರೂ ತಲೆತಗ್ಗಿಸಿಯೇ ನಿಂತಿದ್ದರು. ನಿಶಾ ಸುತ್ತಲೂ ನೋಡುತ್ತ ಬಣ್ಣಬಣ್ಣದ ಹೂವಿನ ಗಿಡಗಳು....ಎಲ್ಲಾ ಕಡೆ ಹಸಿರುಮಯದ ವಾತಾವರಣ ಕಂಡು ಅಮ್ಮನ ಕೆನ್ನೆ ಸವರಿ ಅದರತ್ತ ಕೈ ತೋರಿಸುತ್ತಿದ್ದರೂ ಅವಳ ಮುಖದಲ್ಲಿ ನಗೆ ಇರಲಿಲ್ಲ. ಅರಮೆನೆ ಹೆಬ್ಬಾಗಿಲ ಮುಂದೆಯೇ ರಾಮಚಂದ್ರ ಗುರುಗಳು ಅರವತ್ತು ವರ್ಷ ವಯಸ್ಸಿನ ರಾಜ ಮನೆತನದ ಧಿರಿಸಿನಲ್ಲಿದ್ದ ವ್ಯಕ್ತಿಯೊಡನೆ ಮಾತು ಕಥೆಯಾಗುತ್ತ ನಿಂತಿದ್ದರು.
ಸಾರೋಟ ಹೆಬ್ಬಾಗಿಲಿನ ಮುಂದೇಯೇ ನಿಂತು ಅದರಿಂದ ಹರೀಶ ಮಕ್ಕಳು ಕೆಳಗಿಳಿದರೆ ಅವರನ್ನು ನೋಡಿ ಆ ವ್ಯಕ್ತಿ ಇವರುಗಳ್ಯಾರು ರಾಜ ಮಹಾರಾಜರು ಓಡಾಡಲಿಕ್ಕಾಗಿಯೆ ಉಪಯೋಗಿಸುವ ಸಾರೋಟಿನಲ್ಲಿ ರಾಜಭಟ್ಟರು ಇವರಿಗೆ ಹತ್ತಲು ಹೇಗೆ ಅವಕಾಶ ನೀಡಿದರೆಂದು ಕೋಪದಲ್ಲಿ ಮುನ್ನಡೆದನು. ಆದರೆ ನೀತು ತೋಳಿನಲ್ಲಿದ್ದ ಮಗುವಿನ ಮೇಲೆ ದೃಷ್ಟಿ ಬಿದ್ದೊಡನೆಯೇ ಆತನ ಕಾಲುಗಳು ಅಲುಗಾಡಲಿಕ್ಕೂ ವಿರೋಧಿಸಿದಂತೆ ನಿಂತಲ್ಲೇ ನಿಂತುಬಿಟ್ಟನು. ಆತನ ಮುಖದಲ್ಲಿ ಆಶ್ಚರ್ಯ....ಭಯ....ಆತಂಕ ಎಲ್ಲದರ ಸಮ್ಮಿಶ್ರ ಭಾವನೆಗಳು ಮೂಡುತ್ತಿದ್ದರೆ ನೀತು ಮಗಳನ್ನು ಎತ್ತಿಕೊಂಡು ಅರಮೆನಯ ಹೆಬ್ಬಾಗಿಲನ್ನು ತಲುಪಿದಳು.
No comments:
Post a Comment